ನೀತಿ ಸಂಹಿತೆ ಉಲ್ಲಂಘನೆ ಆರೋಪ: ರಾಹುಲ್ ಗಾಂಧಿ ಎಕ್ಸ್ ಖಾತೆ ಅಮಾನತಿಗೆ ಬಿಜೆಪಿ ಆಗ್ರಹ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರಾಜಸ್ಥಾನ ವಿಧಾನಸಭೆ ಚುನಾವಣೆಯ ಮತದಾನದ ದಿನ ತಮ್ಮ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಹಂಚಿಕೊಂಡು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ರಾಜಸ್ಥಾನ ವಿಧಾನಸಭೆಗೆ ಇಂದು ಮತದಾನ ನಡೆದಿದ್ದು, ಈ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರು, ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಮತದಾನ ಮಾಡುವಂತೆ ಜನರಿಗೆ ಕರೆ ನೀಡಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ, ‘ರಾಜಸ್ಥಾನವು ಉಚಿತ ಚಿಕಿತ್ಸೆ, ಉಚಿತ ಗ್ಯಾಸ್‌ ಸಿಲಿಂಡರ್‌, ಬಡ್ಡಿ ರಹಿತ ಕೃಷಿ ಸಾಲ, ಆಂಗ್ಲ ಶಿಕ್ಷಣ, ಹಳೇ ಪಿಂಚಣಿ ವ್ಯವಸ್ಥೆ, ಜಾತಿಗಣತಿಯನ್ನು ಆಯ್ಕೆ ಮಾಡಲಿದೆ ಎಂದು ಪೋಸ್ಟ್‌ ಮಾಡಿದ್ದಾರೆ. ಅದೇ ಟ್ವೀಟ್‌ನಲ್ಲಿ, ‘ಜನರಿಗೆ ಅನುಕೂಲ ಮಾಡಿಕೊಡುವ ಕಾಂಗ್ರೆಸ್‌ ಸರ್ಕಾರವನ್ನು ಆರಿಸಿ’ ಎಂದೂ ಒತ್ತಾಯಿಸಿದ್ದಾರೆ.

ಮತದಾನಕ್ಕೂ ಪೂರ್ವ 48 ಗಂಟೆ ಯಾವುದೇ ರೀತಿಯ ಪ್ರಚಾರ ನಡೆಸದಂತೆ ನಿಯಮವಿದೆ. ಆದರೆ ರಾಹುಲ್‌ ಗಾಂಧಿ ಅವರ ಈ ಪೋಸ್ಟ್‌ ಅದನ್ನು ಉಲ್ಲಂಘಿಸಿದೆ. ಇದಕ್ಕೆ ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದೆ. ಕಾಂಗ್ರೆಸ್‌ ನಾಯಕ ಜನಪ್ರತಿನಿಧಿಗಳ ಕಾಯ್ದೆಯನ್ನು ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

‘ರಾಹುಲ್‌ ಅವರ ಖಾತೆಯನ್ನು ತಕ್ಷಣವೇ ಆಮಾನತು ಮಾಡುವಂತೆ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್‌’ ಹಾಗೂ ಅದರ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆಯೋಗ ನಿರ್ದೇಶಿಸಬೇಕು. ಬಹಿರಂಗ ಪ್ರಚಾರ ನಿರ್ಬಂಧಿಸುವ 48 ಗಂಟೆ ಅವಧಿಯಲ್ಲಿ ಮತ್ತೆ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಹಾಗೂ ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಧಕ್ಕೆಯಾಗದಂತೆ ತಡೆಯಲು ತಕ್ಷಣವೇ ಆಕ್ಷೇಪಾರ್ಹ ವಿಷಯ ತೆಗೆದುಹಾಕುವಂತೆ ‘ಎಕ್ಸ್‌’ಗೆ ಸೂಚಿಸಬೇಕು’ ಎಂದು ಒತ್ತಾಯಿಸಿದೆ.
ರಾಹುಲ್‌ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಿ, ಕ್ರಮ ಕೈಗೊಳ್ಳುವಂತೆ ರಾಜಸ್ಥಾನದ ಮುಖ್ಯ ಚುನಾವಣಾಧಿಕಾರಿಗೆ ಚುನಾವಣಾ ಆಯೋಗ ಸೂಚನೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!