ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಂಡಿಯಾ ಮೈತ್ರಿ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಒಂದೊಂದೆ ಪಕ್ಷಗಳು ಮೈತ್ರಿಯಿಂದ ಹೊರನಡೆಯುತ್ತಿದೆ.
ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಈಗಾಗಲೇ ಇಂಡಿಯಾ ಮೈತ್ರಿಯಿಂದ ಹೊರನಡೆದಿದೆ. ಜೆಡಿಯು ಬಿಜೆಪಿ ಜೊತೆ ಸೇರಿಕೊಂಡಿದೆ. ಟಿಎಂಸಿ ಹಾಗೂ ಆಪ್ ಏಕಾಂಗಿ ಹೋರಾಟ ಘೋಷಿಸಿದೆ.
ಇದರ ನಡುವೆಕಾಂಗ್ರೆಸ್ ಮಹತ್ವದ ಹೇಳಿಕೆ ನೀಡಿದೆ. ಇಂಡಿಯಾ ಮೈತ್ರಿಯನ್ನು ಕೇವಲ ಲೋಕಸಭೆಗೆ ಸೀಮಿತಿಗೊಳಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.
ಇಂಡಿಯಾ ಮೈತ್ರಿ ಕೇವಲ ಲೋಕಸಭೆಗಾಗಿ ಮಾತ್ರ. ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಇರುವುದಿಲ್ಲ. ಈ ವೇಳೆ ಆಯಾ ರಾಜ್ಯಗಳಲ್ಲಿನ ಮೈತ್ರಿ ಮುಂದುವರಿಯಲಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನೆ ಮೈತ್ರಿಯಲ್ಲಿ ಚುನಾವಣೆ ಎದುರಿಸಲಿದೆ. ಹೀಗೆ ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ಅಥವಾ ಇಂಡಿಯಾ ಮೈತ್ರಿ ಪಕ್ಷಗಳ ಮೈತ್ರಿಗಳು ಅಥವಾ ಏಕಾಂಗಿ ಹೋರಾಟಗಳು ಮುಂದುವರಿಯಲಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಜೆಡಿಯು ನಿರ್ಗಮನದ ಬಳಿಕ ಇಂಡಿಯಾ ಮೈತ್ರಿ ಒಕ್ಕೂಟದ ಸಂಖ್ಯೆ 27ಕ್ಕೆ ಕುಸಿದಿದೆ. 27 ಪ್ರಮುಖ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಲಿದೆ ಎಂದು ಕೋಲ್ಕತಾದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ. ಈ ದೇಶದಲ್ಲಿ ಬಿಜೆಪಿಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿರೋಧಿಸುತ್ತಲೇ ಬಂದಿರುವ ಹಾಗೂ ಪ್ರತಿ ಬಾರಿ ಬಿಜೆಪಿ ವಿರುದ್ದ ಹೋರಾಡಿರುವ ಏಕೈಕ ಪಕ್ಷ ಕಾಂಗ್ರೆಸ್. ಬಿಜೆಪಿ, ಆರ್‌ಎಸ್‌ಎಸ್ ಸಿದ್ದಾಂತದ ರಾಜಕೀಯವನ್ನು ಮಟ್ಟಹಾಕಲು ಇಂಡಿಯಾ ಮೈತ್ರಿ ರಚನೆಯಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ ಯಾತ್ರೆ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಗೆ ನೆರವಾಗಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಹೊಸ ಚೈತನ್ಯ ಮೂಡಿಸಿರುವ ಈ ಯಾತ್ರೆಯಲ್ಲಿ ಜನರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ದೇಶವನ್ನು ರಕ್ಷಿಸಲು ಕಾಂಗ್ರೆಸ್‌ಗೆ ಶಕ್ತಿ ತುಂಬಬೇಕು ಎಂದು ರಮೇಶ್ ಮನವಿ ಮಾಡಿದ್ದಾರೆ.