April 28, 2026
Tuesday, April 28, 2026
spot_img

ಮೈತ್ರಿ ‘ಹಗ್ಗಜಗ್ಗಾಟ’ ಹೈಕಮಾಂಡ್ ಅಂಗಳಕ್ಕೆ: ಆರ್.ಅಶೋಕ್ ಬಿಚ್ಚಿಟ್ಟ ಗುಟ್ಟೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಸ್ಪರ್ಧಿಸುತ್ತವೆಯೇ ಎಂಬ ಕುತೂಹಲಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸ್ಪಷ್ಟನೆ ನೀಡಿದ್ದಾರೆ.

ಮೈತ್ರಿ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಮೈತ್ರಿ ಮಾಡಿಕೊಳ್ಳುವ ಅಧಿಕಾರ ಅಥವಾ ನಿರ್ಧಾರ ನಮ್ಮ ಕೈಲಿಲ್ಲ. ಇದು ಸಂಪೂರ್ಣವಾಗಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅವರು ಮೈತ್ರಿ ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ. ಆದರೆ, ಪಕ್ಷವಾಗಿ ನಾವು ಚುನಾವಣೆಯನ್ನು ಎದುರಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ” ಎಂದು ತಿಳಿಸಿದರು.

ಜೆಡಿಎಸ್ ಶೇಕಡಾ 50ರಷ್ಟು ಸ್ಥಾನಗಳನ್ನು ಕೇಳುತ್ತಿದೆ ಎಂಬ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್, “ಸೀಟು ಹಂಚಿಕೆಯ ಬಗ್ಗೆ ಕೇಂದ್ರ ನಾಯಕರು ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರು ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಚುನಾವಣೆ ಅಧಿಕೃತವಾಗಿ ಘೋಷಣೆಯಾದ ನಂತರವಷ್ಟೇ ಈ ಹೊಂದಾಣಿಕೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ” ಎಂದರು.

ಒಟ್ಟಾರೆಯಾಗಿ, ಗ್ರೇಟರ್ ಬೆಂಗಳೂರು ಚುನಾವಣಾ ಕಣದಲ್ಲಿ ಮೈತ್ರಿ ದೋಸ್ತಿಗಳ ನಡುವಿನ ಸೀಟು ಹಂಚಿಕೆಯ ಚೆಂಡು ಈಗ ದೆಹಲಿ ನಾಯಕರ ಅಂಗಳದಲ್ಲಿದೆ ಎಂಬುದು ಅಶೋಕ್ ಅವರ ಮಾತುಗಳಿಂದ ಸ್ಪಷ್ಟವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !