Tuesday, November 25, 2025

ಶಾಲೆ ಪಕ್ಕದಲ್ಲೇ ಸ್ಫೋಟಕಗಳ ರಾಶಿ: ಬೆಚ್ಚಿಬಿದ್ದ ಅಲ್ಮೋರಾ ಗ್ರಾಮಸ್ಥರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ದಬಾರಾ ಗ್ರಾಮದಲ್ಲಿ ಶಾಲೆಯ ಸಮೀಪವೇ ಅಪಾರ ಪ್ರಮಾಣದ ಸ್ಫೋಟಕ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಭಾರಿ ಆತಂಕ ಮೂಡಿಸಿದೆ. ಪೊದೆಯೊಂದರಲ್ಲಿ ಅನುಮಾನಾಸ್ಪದ ಪ್ಯಾಕೆಟ್‌ಗಳನ್ನು ಗಮನಿಸಿದ ಶಾಲೆಯ ಪ್ರಾಂಶುಪಾಲರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ಯಾಕೆಟ್‌ಗಳಲ್ಲಿ 20 ಕೆಜಿಗಿಂತ ಹೆಚ್ಚು ತೂಕದ 161 ಜೆಲಾಟಿನ್ ಕಡ್ಡಿಗಳು ಇರುವುದನ್ನು ಪತ್ತೆಹಚ್ಚಿದ್ದಾರೆ.

ಇತ್ತೀಚೆಗೆ ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದಲ್ಲಿ 3,000 ಕೆಜಿ ಸ್ಫೋಟಕ ಪತ್ತೆಯಾದ ಹಿನ್ನೆಲೆಯಲ್ಲಿ, ಈ ಘಟನೆ ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಉಧಮ್ ಸಿಂಗ್ ನಗರ ಮತ್ತು ನೈನಿತಾಲ್ ಬಾಂಬ್ ನಿಷ್ಕ್ರಿಯ ದಳಗಳು ಹಾಗೂ ಶ್ವಾನ ದಳಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪತ್ತೆಯಾದ ಸ್ಫೋಟಕಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ.

ಸಾಮಾನ್ಯವಾಗಿ ಗಣಿಗಾರಿಕೆಯಲ್ಲಿ ಬಂಡೆಗಳನ್ನು ಸ್ಫೋಟಿಸಲು ಬಳಸುವ ಜೆಲಾಟಿನ್ ಕಡ್ಡಿಗಳು ಗ್ರಾಮಕ್ಕೆ ಹೇಗೆ ಬಂದವು ಎಂಬುದು ಈಗ ತನಿಖೆಯ ಪ್ರಮುಖ ಅಂಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಸ್ಫೋಟಕ ವಸ್ತುಗಳ ಕಾಯ್ದೆ 1908ರ ಸೆಕ್ಷನ್ 4(ಎ) ಮತ್ತು ಬಿಎನ್‌ಎಸ್ ಸೆಕ್ಷನ್ 288ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ.

error: Content is protected !!