ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ, ಗಣೇಶ್ ಜೊತೆಗಿನ ಪಟಾಕಿ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದ ಆರೋಪದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ರನ್ಯಾ ಅವರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ನಟಿ ರನ್ಯಾ ಬರೋಬ್ಬರಿ 14.8 ಕೆ.ಜಿ ಚಿನ್ನದೊಂದಿಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ನಿನ್ನೆ ರಾತ್ರಿ ದುಬೈನಿಂದ ಬೆಂಗಳೂರಿಗೆ ಬಂದಿದ್ದ ನಟಿಯನ್ನು ನಾಗವಾರದ ಡಿಆರ್ಐ ಕಚೇರಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ.
ವ್ಯಾಪಾರದ ಉದ್ದೇಶಕ್ಕಾಗಿ ದುಬೈಗೆ ಹೋಗ್ತೀನಿ ಎಂದು ಹೇಳಿದ್ದ ರನ್ಯಾ ರಾವ್ ಕುರಿತು ದೆಹಲಿ ಡಿಆರ್ಐ ಟೀಮ್ಗೆ ಖಚಿತವಾದ ಮಾಹಿತಿ ಇತ್ತು. ನಿನ್ನೆ ಆಕೆ ಬರೋದಕ್ಕೂ 2 ಗಂಟೆ ಮೊದಲೇ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಹಾಗೂ ಪೊಲೀಸರು ಅಲರ್ಟ್ ಆಗಿ ಕಾದು ಕುಳಿತಿದ್ದರು.
ದುಬೈನಿಂದ ಎಮಿರೈಟ್ಸ್ ಫ್ಲೈಟ್ನಲ್ಲಿ ನಟಿ ರನ್ಯಾ ರಾವ್ KIAL ವಿಮಾನ ನಿಲ್ದಾಣಕ್ಕೆ ಬಂದರು. 14.8 ಕೆ.ಜಿ ಚಿನ್ನದೊಂದಿಗೆ ಏರ್ಪೋರ್ಟ್ಗೆ ಬಂದಿಳಿದ ನಟಿ ರನ್ಯಾ ತನ್ನ ದೇಹದ ಒಳಗೆ ಚಿನ್ನದ ಬಿಲ್ಲೆಗಳನ್ನ ಇಟ್ಟುಕೊಂಡು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಬೆಂಗಳೂರಿನಲ್ಲಿ ನಟಿ ರನ್ಯಾ ರಾವ್ ಲ್ಯಾಂಡ್ ಆಗ್ತಿದ್ದಂತೆ ನಿನ್ನೆ ಸಂಜೆ 7:30ರ ಸುಮಾರಿಗೆ ಏರ್ಪೋರ್ಟ್ನಲ್ಲಿ DRI ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಂದು ವಿಚಾರಣೆಯ ಬಳಿಕ ನಟಿ ರನ್ಯಾ ರಾವ್ ಅವರನ್ನು CCH 82 ಕೋರ್ಟ್ಗೆ ಹಾಜರು ಪಡಿಸಲಾಗಿದೆ.