ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಕದಿನ ವಿಶ್ವಕಪ್ ಟೂರ್ನಿ ಯಲ್ಲಿ ಭಾಗವಹಿಸಲು ಒಂದಲ್ಲ ಒಂದು ನೆಪ ಹೇಳುತ್ತಿರುವ ಪಾಕ್ ಸರಕಾರ, ಕೊನೆಗೂ ತನ್ನ ನಾಟಕ ಬಂದ್ ಮಾಡಿದ್ದು, ಭಾರತ ಆತಿಥ್ಯ ವಹಿಸುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಗೆ ತಂಡ ಕಳುಹಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ತಂಡವನ್ನು ಕಳುಹಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ವಿದೇಶಾಂಗ ಸಚಿವಾಲಯ ಈ ಕುರಿತು ಸ್ಪಷ್ಟನೆ ನೀಡಿದೆ.
ಅಕ್ಟೋಬರ್ 5 ರಿಂದ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಳ್ಳುತ್ತಿದೆ. ಅಕ್ಟೋಬರ್ 15ರಂದು ಅಹಮ್ಮದಾಬಾದ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮಖಿಯಾಗುತ್ತಿದೆ.
ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಆದರೆ ಪಾಕಿಸ್ತಾನ ಪ್ರವಾಸಕ್ಕೆ ಭಾರತ ನಿರಾಕರಿಸಿತ್ತು. ಭಾರತ ತಂಡ ಪಾಕ್ ಪ್ರವಾಸ ಮಾಡದಿದ್ದರೆ, ಏಕದಿನ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ, ಭಾರತ ಪ್ರವಾಸ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿತ್ತು. ಆದರೆ ಬಿಸಿಸಿಐ ತನ್ನ ನಿರ್ಧಾರ ಪ್ರಕಟಿಸಿತ್ತು. ಪಾಕಿಸ್ತಾನ ಪ್ರವಾಸಕ್ಕೆ ಭಾರತ ತಂಡ ಕಳುಹಿಸಲು ಸಾಧ್ಯವಿಲ್ಲ ಎಂದಿತ್ತು. ಇಷ್ಟೇ ಅಲ್ಲ ಟೀಂ ಇಂಡಿಯಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸುವಲ್ಲಿ ಭಾರತ ಯಶಸ್ವಿಯಾಗಿತ್ತು.
ಬಿಸಿಸಿಐ ಈ ನಿರ್ಧಾರ ಪಾಕಿಸ್ತಾನ ಸರ್ಕಾರವನ್ನು ಕೆರಳಿಸಿತ್ತು. ಭಾರತ ಆತಿಥ್ಯ ವಹಿಸುವ ಏಕದಿನ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಕಳುಹಿಸಲು ಸಾಧ್ಯವಿಲ್ಲ ಎಂದು ಪಿಸಿಬಿ ಪಟ್ಟು ಹಿಡಿದಿತ್ತು. ಆದರೆ ಭಾರತಈ ವಾದಕ್ಕೆ ಸೊಪ್ಪು ಹಾಕಿಲ್ಲ. ಇದೀಗ ಭಾರತ ಪ್ರವಾಸಕ್ಕೆ ಪಾಕಿಸ್ತಾನ ತಂಡ ಕಳುಹಿಸಲು ಶೆಹಬಾಜ್ ಷರೀಫ್ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಏಷ್ಯಾಕಪ್ ಟೂರ್ನಿ ಆ.30ರಿಂದ ಸೆ.17ರ ವರೆಗೆ ನಡೆಯಲಿದೆ.