ಅಮರನಾಥ ಯಾತ್ರೆ: ಭದ್ರತೆಯ ನಡುವೆ 7,200ಕ್ಕೂ ಹೆಚ್ಚು ಯಾತ್ರಾರ್ಥಿಗಳ ಪಯಣ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿರಂತರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಭಕ್ತರ ಭಕ್ತಿ ಕಡಿಮೆಯಾಗಿಲ್ಲ. ಭಾನುವಾರ ಬೆಳಿಗ್ಗೆ 7,200ಕ್ಕೂ ಹೆಚ್ಚು ಯಾತ್ರಾರ್ಥಿಗಳ ಹೊಸ ತಂಡವು ಜಮ್ಮುವಿನ ಭಗವತಿ ನಗರದ ಮೂಲ ಶಿಬಿರದಿಂದ ಹಿಮಾಲಯದ ದಕ್ಷಿಣ ಭಾಗದಲ್ಲಿರುವ ಪವಿತ್ರ ಅಮರನಾಥ ಗುಹೆ ದೇವಾಲಯದತ್ತ ಪಯಣ ಆರಂಭಿಸಿದೆ.

ಇದು ಈ ವರ್ಷದ ಐದನೇ ತಂಡವಾಗಿದ್ದು, ಬೆಳಗಿನ ಜಾವ 3.15 ರಿಂದ 4.30ರೊಳಗೆ ಜಮ್ಮುವಿನ ಭಗವತಿ ನಗರದ ಬೇಸ್‌ ಕ್ಯಾಂಪ್‌ನಿಂದ ವಾಹನಗಳಲ್ಲಿ ಹೊರಟರು. ಶ್ರದ್ಧಾ ಮತ್ತು ಭಕ್ತಿಯೊಂದಿಗೆ ಈ ಮಹಾಯಾತ್ರೆಗೆ ಹೊರಟ ಯಾತ್ರಾರ್ಥಿಗಳ ಸುರಕ್ಷತೆಯ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈವರೆಗೆ ಪ್ರಾರಂಭಗೊಂಡ ಯಾತ್ರೆಯಲ್ಲಿ ಭಾನುವಾರದ ವರೆಗೆ ಸುಮಾರು 50,000ಕ್ಕೂ ಹೆಚ್ಚು ಭಕ್ತರು ಅಮರನಾಥ ದೇವಾಲಯದ ದರ್ಶನ ಪಡೆದಿದ್ದಾರೆ. ಭಾನುವಾರದ ತಂಡದಲ್ಲಿ 1,587 ಮಹಿಳೆಯರು ಮತ್ತು 30 ಮಕ್ಕಳೂ ಇದ್ದಾರೆ. ಎಲ್ಲಾ ಭಕ್ತರಿಗೂ ನಿಗದಿತ ವಾಹನ ವ್ಯವಸ್ಥೆ ಹಾಗೂ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

ಜುಲೈ 3ರಂದು ಪ್ರಾರಂಭಗೊಂಡ ಈ 38 ದಿನಗಳ ಯಾತ್ರೆಯು ಆಗಸ್ಟ್ 9ರಂದು ಸಮಾರೋಪಗೊಳ್ಳಲಿದ್ದು, ಈವರೆಗೆ 3.5 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಆನ್‌ಲೈನ್‌ನಲ್ಲಿ ತಮ್ಮ ನೋಂದಣಿಯನ್ನು ಪೂರೈಸಿದ್ದಾರೆ.

ಕಳೆದ ಮೇ ತಿಂಗಳಿನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಈ ಯಾತ್ರೆಗೆ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ. ಆಗ 26 ಜನರು ಹುತಾತ್ಮರಾಗಿದ್ದ ಘಟನೆ ಭಕ್ತರಲ್ಲಿ ಆತಂಕ ಉಂಟುಮಾಡಿದ್ದರೂ, ಈಗ ಯಾತ್ರೆ ಶಾಂತ ಹಾಗೂ ಸುವ್ಯವಸ್ಥಿತ ರೀತಿಯಲ್ಲಿ ಸಾಗುತ್ತಿದೆ. ಎಲ್ಲೆಡೆ ಭದ್ರತೆ ಕಲ್ಪಿಸಿ ಭಕ್ತರ ಸುರಕ್ಷತೆ ಖಚಿತಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!