ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರದಲ್ಲಿನ ಭಾರಿ ಮಳೆ ಮತ್ತು ಭೂ ಕುಸಿತದಿಂದ ಒಂದು ದಿನದ ಮಟ್ಟಿಗೆ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಇಂದು ಮತ್ತೆ ಪುನರಾರಂಭಗೊಂಡಿದೆ. 7,900 ಯಾತ್ರಿಕರ ಎರಡು ಬ್ಯಾಚ್ಗಳು ಪಹಲ್ಗಾಮ್ ಮತ್ತು ಬಾಲ್ಟಾಲ್ನ ಎರಡು ಬೇಸ್ ಕ್ಯಾಂಪ್ನಿಂದ ಹಿಮಲಿಂಗ ದರ್ಶನಕ್ಕೆ ತೆರಳಿವೆ.
ಭಾರೀ ಮಳೆಯಿಂದ ಉಂಟಾಗಿದ್ದ ಭೂ ಕುಸಿತದಲ್ಲಿ ಓರ್ವ ಮಹಿಳಾ ಯಾತ್ರಿಕರು ಸಾವನ್ನಪ್ಪಿದ್ದರು. ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಗುರುವಾರದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಬಿಆರ್ಒ ಹಾಗೂ ಸೇನಾ ಸಿಬ್ಬಂದಿ ರಸ್ತೆ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದು, ಮತ್ತೆ ಯಾತ್ರೆ ಆರಂಭಿಸಲಾಗಿದೆ.
ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಅಧಿಕಾರಿಗಳು, ಪಹಲ್ಗಾಮ್ ಮತ್ತು ಬಾಲ್ಟಾಲ್ ಎರಡು ಬೇಸ್ ಕ್ಯಾಂಪ್ನಿಂದ ಇಂದು ಮತ್ತೆ ಯಾತ್ರೆ ಆರಂಭವಾಗಿದೆ. 7,908 ಯಾತ್ರಿಕರ 16ನೇ ಬ್ಯಾಚ್ಗೆ ಸಿಆರ್ಪಿಎಫ್ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣೆ ಒದಗಿಸಿದ್ದಾರೆ. ಬ್ಯಾಚ್ನಲ್ಲಿ 5,957 ಪುರುಷರು, 1,613 ಮಹಿಳೆಯರು ಮತ್ತು 26 ಮಕ್ಕಳು ಮತ್ತು 310 ಸಾಧು ಮತ್ತು ಸಾಧ್ವಿಗಳು ಇದ್ದಾರೆ. ಭಗವತಿನಗರದ ಮೂಲ ಶಿಬಿರದಿಂದ 261 ವಾಹನಗಳಲ್ಲಿ ಬೆಳಗಿನ ಜಾವ 3.30ರಿಂದ 4.25ರ ನಡುವೆ ಯಾತ್ರೆ ಪುನಾರಂಭವಾಗಿದೆ ಎಂದು ತಿಳಿಸಿದ್ದಾರೆ.
ಮೊದಲ ಯಾತ್ರಿಕರ ತಂಡದಲ್ಲಿ 2,879 ಮಂದಿ ಇದ್ದು, 92 ವಾಹನಗಳಲ್ಲಿ ತಲುಪಿದ್ದಾರೆ. ಇದು ಗಂಡೇರ್ಬಲ್ ಜಿಲ್ಲೆಯ ಬಾಲ್ಟಾಲ್ ಮಾರ್ಗದ 14 ಕಿ.ಮೀ ದೂರದ ಪ್ರಯಾಣವಾಗಿದೆ. ಎರಡನೇ ತಂಡದಲ್ಲಿ 5,029 ಯಾತ್ರಿಕರಿದ್ದು, 169 ವಾಹನಗಳ ಮೂಲಕ ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ ಮಾರ್ಗದ 48 ಕಿ.ಮೀ ಪ್ರಯಾಣ ಮಾಡಲಿದ್ದಾರೆ. ಹರ ಹರ ಮಹಾದೇವ ಘೋಷಣೆಗಳ ನಡುವೆ ಯಾತ್ರಿಕರು ಉತ್ಸಾಹದಿಂದ ಯಾತ್ರೆಗೆ ತೆರಳಿದ್ದಾರೆ.