ಹೊಸದಿಗಂತ ಡಿಜಿಟಲ್ ಡೆಸ್ಕ್:
ಬದುಕಿನಲ್ಲಿ ಕೆಲವು ಅವಕಾಶಗಳು ಅನಿರೀಕ್ಷಿತವಾಗಿ ಬರುತ್ತವೆ. ಆದರೆ ಅದನ್ನು ಬಳಸಿಕೊಂಡು, ಇಡೀ ಸಮಾಜವೇ ತಿರುಗಿ ನೋಡುವಂತಹ ಸಾಧನೆ ಮಾಡಿದ ಪೋರಿ ಅದಿತಿ ಪಾರ್ಥೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಪ್ರತಿಷ್ಠಿತ ಪುಣೆ ಜಿಲ್ಲಾ ಪರಿಷತ್ ನಾಸಾ ಪ್ರವಾಸಕ್ಕೆ ಆಯ್ಕೆಯಾಗಿರುವ ಕೇವಲ 12 ವರ್ಷದ ಈ ಬಾಲಕಿ, ತನ್ನ ಬಡತನ ಮತ್ತು ಸವಾಲುಗಳನ್ನು ಮೀರಿ ಇತಿಹಾಸ ಸೃಷ್ಟಿಸಿದ್ದಾಳೆ. ಪುಣೆ ಜಿಲ್ಲಾ ಪರಿಷತ್‌ನ 25 ಆಯ್ದ ವಿದ್ಯಾರ್ಥಿಗಳ ತಂಡದಲ್ಲಿ ಅದಿತಿ ಸ್ಥಾನ ಪಡೆದಿದ್ದಾಳೆ.
ಬಡತನದ ದಾರಿಯಲ್ಲಿ ಅಸಾಮಾನ್ಯ ಛಲ
ಪುಣೆಯ ಭೋರ್ ತಾಲ್ಲೂಕಿನಲ್ಲಿರುವ ನಿಗುಡಘರ್ ಜಿಲ್ಲಾ ಪರಿಷತ್ ಶಾಲೆಯಲ್ಲಿ ಓದುತ್ತಿರುವ ಅದಿತಿ ಪಾರ್ಥೆ ಅವರ ಮನೆಗೆ ಕಡುಬಡತನದ ಆವರಣವಿದೆ. ಅವರ ತಂದೆ ಮತ್ತು ಚಿಕ್ಕಪ್ಪ ಇಬ್ಬರೂ ಪುಣೆಯ ಮಾರುಕಟ್ಟೆಯಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಾರೆ. ಮನೆಯಲ್ಲಿ ಸ್ಮಾರ್ಟ್‌ಫೋನ್ ಇಲ್ಲ, ಕಂಪ್ಯೂಟರ್ ಅಂತೂ ಇಲ್ಲವೇ ಇಲ್ಲ. ಇಂತಹ ಕಠಿಣ ಪರಿಸ್ಥಿತಿಯ ನಡುವೆಯೂ ಓದಬೇಕೆಂಬ ಅದಮ್ಯ ಛಲ ಹೊಂದಿರುವ ಅದಿತಿ, ಪುಣೆ ಜಿಲ್ಲಾ ಪರಿಷತ್ ಜಾರಿಗೆ ತಂದ ಮಹತ್ವಾಕಾಂಕ್ಷೆಯ ನಾಸಾ ಭೇಟಿ ಉಪಕ್ರಮದಲ್ಲಿ ಅಸಾಮಾನ್ಯ ಸಾಧನೆ ಮಾಡಿ, ತನ್ನ ಕನಸಿಗೆ ರೆಕ್ಕೆ ಕೊಟ್ಟಿದ್ದಾಳೆ.
ತ್ರಿವಳಿ ಸುತ್ತಿನ ಸವಾಲು ದಾಟಿ ನಾಸಾಗೆ ಲಗ್ಗೆ
ಜಿಲ್ಲಾ ಪರಿಷತ್‌ನ ಈ ಮಹತ್ವದ ಯೋಜನೆಗೆ, ಅಂತರ್ ವಿಶ್ವವಿದ್ಯಾಲಯ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಕೇಂದ್ರದ (IUCAA) ಸಹಯೋಗವಿತ್ತು. 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಆಗಸ್ಟ್‌ನಲ್ಲಿ ಮೂರು ಸುತ್ತಿನ ಪರೀಕ್ಷೆಗಳನ್ನು ನಡೆಸಲಾಯಿತು. ಮೊದಲಿಗೆ, 16,671 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ಮೊದಲು ಎಂಸಿಕ್ಯೂ ಪರೀಕ್ಷೆಗೆ 13,000 ವಿದ್ಯಾರ್ಥಿಗಳು ಹಾಜರಾಗಿದ್ದರು.
ಮೊದಲ ಸುತ್ತಿನಲ್ಲಿ, ಪ್ರತಿ ಬ್ಲಾಕ್‌ನಿಂದ ಟಾಪ್ 10% ವಿದ್ಯಾರ್ಥಿಗಳು ಆಯ್ಕೆಯಾದರು. ಎರಡನೇ ಸುತ್ತು ಆನ್‌ಲೈನ್ ಎಂಸಿಕ್ಯೂ ಪರೀಕ್ಷೆಯಾಗಿತ್ತು. ಆದರೆ, ಅದಿತಿ ಶಾಲೆಯಲ್ಲಿ ಕಂಪ್ಯೂಟರ್ ಸೌಲಭ್ಯ ಇರಲಿಲ್ಲ. ಆಗ ಪ್ರಾಂಶುಪಾಲರಾದ ಅಶೋಕ್ ಬಂಡಲ್ ಅವರು ತಮ್ಮ ವೈಯಕ್ತಿಕ ಲ್ಯಾಪ್‌ಟಾಪ್ ಬಳಸಿ ವಿದ್ಯಾರ್ಥಿಗಳಿಗೆ ನೆರವಾದರು. ಅಂತಿಮ ಸುತ್ತಿನಲ್ಲಿ, IUCAA ನಲ್ಲಿ ವ್ಯಕ್ತಿಗತ ಸಂದರ್ಶನಗಳಿಗಾಗಿ 235 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.
ಈ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ದಾಟಿ, ಅಂತಿಮವಾಗಿ 25 ವಿದ್ಯಾರ್ಥಿಗಳು ನಾಸಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ, ಅವರಲ್ಲಿ ಅದಿತಿ ಒಬ್ಬಳು. ಇನ್ನಿತರ 50 ವಿದ್ಯಾರ್ಥಿಗಳು ಅಕ್ಟೋಬರ್ 6 ರಂದು ತಿರುವನಂತಪುರಂನಲ್ಲಿರುವ ಇಸ್ರೋಗೆ ಭೇಟಿ ನೀಡಿದ್ದರು.
ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಅದಿತಿ, ಪ್ರತಿದಿನ ಶಾಲೆಗೆ ಹೋಗಲು ಮೂರೂವರೆ ಕಿಲೋಮೀಟರ್ ನಡೆದುಕೊಂಡು ಹೋಗುತ್ತಾಳೆ. ಇದುವರೆಗೆ ರೈಲು ಹತ್ತದ ಈ ಹುಡುಗಿ, ಈಗ ಮುಂಬೈನಿಂದ ವಿಮಾನ ಹತ್ತಲಿದ್ದಾಳೆ. ಏಳು ಸಾಗರಗಳನ್ನು ದಾಟಿ ಅಮೆರಿಕದಲ್ಲಿರುವ ವಿಶ್ವದ ಅಗ್ರ ಬಾಹ್ಯಾಕಾಶ ಸಂಸ್ಥೆಯ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾಳೆ.
ಈ ಸಿಹಿ ಸುದ್ದಿ ತಿಳಿದಾಗ ಆದ ಸಂತೋಷವನ್ನು ನೆನಪಿಸಿಕೊಂಡ ಅದಿತಿ, “ಪ್ರಾಂಶುಪಾಲರು ನನ್ನ ಚಿಕ್ಕಮ್ಮನಿಗೆ ನಾನು ಆಯ್ಕೆಯಾಗಿರುವ ಬಗ್ಗೆ ಹೇಳಿದಾಗ, ಅವರಿಗೆ ಸಂತೋಷದಲ್ಲಿ ಮಾತೇ ಹೊರಡಲಿಲ್ಲ. ನನ್ನ ತಾಯಿಗೂ ತುಂಬಾ ಖುಷಿಯಾಯ್ತು. ನಾನು ಬೆಳಿಗ್ಗೆ 7 ಗಂಟೆಗೆ ಅವರಿಗೆ ಕರೆ ಮಾಡಿ ‘ಅಮ್ಮಾ, ನಾನು ಅಮೆರಿಕಕ್ಕೆ ಹೋಗುತ್ತಿದ್ದೇನೆ’ ಎಂದು ಹೇಳಿದೆ. ಆ ದಿನ ಅಮ್ಮ ನನಗೆ ಹದಿನೈದು ಬಾರಿ ಕರೆ ಮಾಡಿದ್ದರು,” ಎಂದು ರೋಮಾಂಚನದಿಂದ ಹೇಳಿದ್ದಾಳೆ.
ಬಡತನವನ್ನು ಮೀರಿ ಸಾಧನೆ ಮಾಡಿರುವ ಅದಿತಿಯ ಈ ಪಯಣ ಇಡೀ ಜಿಲ್ಲಾ ಪರಿಷತ್ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ.

