ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ‘ಧುರಂದರ್’ ಸಿನಿಮಾದ ಪ್ರಚಾರಕ್ಕಾಗಿ ಆಗಮಿಸಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ದಕ್ಷಿಣ ಭಾರತದ ಸೂಪರ್‌ಹಿಟ್ ಚಿತ್ರ ‘ಕಾಂತಾರ’ವನ್ನು ಹೊಗಳಲು ಹೋಗಿ ವಿವಾದ ಮೈಮೇಲೆ ಎಳೆದುಕೊಂಡರು.
ಸಭೆಯಲ್ಲೇ ಕುಳಿತಿದ್ದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಉದ್ದೇಶಿಸಿ ಮಾತನಾಡಿದ ರಣವೀರ್ ಸಿಂಗ್, “ರಿಷಬ್ ಅವರೇ ನಿಮ್ಮದು ಅದ್ಭುತ ನಟನೆ. ಮಹಿಳಾ ದೆವ್ವ ನಿಮ್ಮ ದೇಹದ ಒಳಗೆ ಹೋದಾಗ ನಿಮ್ಮ ನಟನೆ ಅದ್ಭುತವಾಗಿತ್ತು,” ಎಂದು ಹೇಳಿ ಎಡವಟ್ಟು ಮಾಡಿಕೊಂಡರು.
ಮೊದಲ ಪ್ರಮಾದ: ‘ಕಾಂತಾರ’ ಚಿತ್ರದ ಪ್ರಮುಖ ಅಂಶವಾಗಿರುವ ಕರಾವಳಿಯ ನಂಬಿಕೆ ಮತ್ತು ಸಂಸ್ಕೃತಿಯ ಭಾಗವಾದ ‘ದೈವ’ ಪಾತ್ರವನ್ನು, ಅದರ ಸೂಕ್ಷ್ಮತೆಯನ್ನು ಅರಿಯದೆ ‘ದೆವ್ವ’ ಎಂದು ಕರೆದಿದ್ದು ಕರಾವಳಿ ಜನರ ಕೆಂಗಣ್ಣಿಗೆ ಗುರಿಯಾಯಿತು.
ಅಷ್ಟೇ ಅಲ್ಲ, ರಣವೀರ್ ಸಿಂಗ್ ಅವರು ಆ ಪಾತ್ರವನ್ನು ಅನುಕರಿಸಲು ಹೋಗಿ ಅದನ್ನು ಹೀಯಾಳಿಸಿದಂತೆ ಕಾಣಿಸಿತು. ಈ ಘಟನೆಯಿಂದ ರಿಷಬ್ ಶೆಟ್ಟಿ ಅವರಿಗೂ ಮುಜುಗರ ಉಂಟಾಗಿತ್ತು ಎಂದು ವರದಿಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ಪ್ರೈಮ್ ವಿಡಿಯೋದಿಂದ ರಣವೀರ್ ವಿವಾದಕ್ಕೆ ‘ಕಾಂತಾರ’ ಟಾಂಗ್!
ರಣವೀರ್ ಸಿಂಗ್ ಹೇಳಿಕೆಯ ಬಿಸಿ ಇನ್ನೂ ಕಡಿಮೆಯಾಗಿಲ್ಲ. ಈ ಸಂದರ್ಭದಲ್ಲೇ, ಓಟಿಟಿ ಪ್ಲಾಟ್‌ಫಾರ್ಮ್ ಅಮೇಜಾನ್ ಪ್ರೈಮ್ ವಿಡಿಯೋ ಸಂಸ್ಥೆಯು ಸೂಕ್ಷ್ಮವಾದ ನಡೆ ಇಟ್ಟಿದೆ. ಸದ್ಯಕ್ಕೆ ‘ಕಾಂತಾರ: ಚಾಪ್ಟರ್ 1’ ಚಿತ್ರವು ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.
ಪ್ರೈಮ್ ವಿಡಿಯೋ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ‘ಕಾಂತಾರ’ ಹಿಂದಿ ವರ್ಷನ್‌ನ ವಿಡಿಯೋ ಕ್ಲಿಪ್ ಒಂದನ್ನು ಹಂಚಿಕೊಂಡಿದೆ. ಆದರೆ, ಅವರು ಹಂಚಿಕೊಂಡಿರುವ ದೃಶ್ಯ ಬೇರೆ ಯಾವುದೋ ಅಲ್ಲ. ರಣವೀರ್ ಸಿಂಗ್ ಅವರು ‘ದೈವವನ್ನು ದೆವ್ವ’ ಎಂದು ವಿವರಿಸಿದ ಪಾತ್ರಕ್ಕೆ ಸಂಬಂಧಿಸಿದ ದೃಶ್ಯವನ್ನೇ ಹಂಚಿಕೊಂಡಿದ್ದಾರೆ!
“ರಣವೀರ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು, ‘ದೈವ’ ಮತ್ತು ‘ದೆವ್ವ’ದ ನಡುವಿನ ವ್ಯತ್ಯಾಸವನ್ನು ಒತ್ತಿಹೇಳಲು ಅಥವಾ ದಕ್ಷಿಣ ಭಾರತದ ಸಂಸ್ಕೃತಿಯ ಗೌರವವನ್ನು ಎತ್ತಿಹಿಡಿಯಲು ಪ್ರೈಮ್ ವಿಡಿಯೋ ಈ ವಿವಾದಾತ್ಮಕ ಕ್ಲಿಪ್‌ನ್ನೇ ಹಂಚಿಕೊಂಡಿದೆ,” ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ವ್ಯಾಖ್ಯಾನಿಸುತ್ತಿದ್ದಾರೆ.
ಹೀಗಾಗಿ, ಇಡೀ ವಿವಾದಕ್ಕೆ ಪ್ರೈಮ್ ವಿಡಿಯೋ ಸಂಸ್ಥೆ ‘ಕಾಂತಾರ’ ಚಿತ್ರದ ಮೂಲಕವೇ ಪರೋಕ್ಷವಾಗಿ ಮತ್ತು ಪ್ರಬಲವಾಗಿ ‘ಕೌಂಟರ್’ ನೀಡಿದೆ ಎಂಬ ಚರ್ಚೆ ಭಾರಿ ಸದ್ದು ಮಾಡುತ್ತಿದೆ.

