April 5, 2026
Sunday, April 5, 2026
spot_img

ಎನ್‌ಎಂಎಸಿಸಿ ಸಂಭ್ರಮದಲ್ಲಿ ಅಂಬಾನಿ ಫ್ಯಾಮಿಲಿ: ಚಿನ್ನದ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ಮಿಂಚಿದ ನೀತಾ ಅಂಬಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೈವಿಧ್ಯಮಯ ಸೀರೆ ಲುಕ್‌ಗಳಿಂದ ಗಮನ ಸೆಳೆಯುವ ನೀತಾ ಅಂಬಾನಿ ಈ ಬಾರಿ ಐವರಿ ಬಣ್ಣ ಮಿಶ್ರಿತ ಚಿನ್ನದ ನೂಲುಗಳಿಂದ ನೇಯ್ದ ಕೆಂಪು ಅಂಚಿನ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ಮಿಂಚಿದ್ದಾರೆ.

ಮುಂಬಯಿನಲ್ಲಿ ಸ್ಥಾಪಿಸಿರುವ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ (ಎನ್‌ಎಂಎಸಿಸಿ) ಮೂರನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಹೊನ್ನಿನ ಪ್ರಭೆಯಂತೆ ಮಿಂಚುವ ಈ ಚಂದದ ಕಾಂಜೀವರಂ ಸೀರೆಯಲ್ಲಿ ದೇವಲೋಕದ ಅಪ್ಸರೆಯಂತೆ ಕಂಗೊಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಪತಿ ಮುಕೇಶ್ ಅಂಬಾನಿ ಜತೆಗೆ ಆಗಮಿಸಿದ್ದ ಅವರು ಕಲೆ, ಕಲಾವಿದರು ಮತ್ತು ಕಲಾಭಿಮಾನಿಗಳನ್ನು ಪರಸ್ಪರ ಒಂದೇ ಸೂರಿನಲ್ಲಿ ಬೆಸೆದು ಕಲಾ ಸ್ಫೂರ್ತಿ ನೀಡುವ ಆ ಭವ್ಯ ಸಾಂಸ್ಕೃತಿಕ ಭವನಕ್ಕೆ ಮೂರು ವರ್ಷ ತುಂಬಿದ ಪ್ರಯುಕ್ತ ನಡೆದ ಪಿಂಕ್ ಕಾರ್ಪೆಟ್ ಸಮಾರಂಭವನ್ನು ಉದ್ಘಾಟಿಸಿ ಸಂಭ್ರಮಿಸಿದ್ದಾರೆ.

ಸ್ವದೇಶ್‌ನಲ್ಲಿ ತಯಾರಾದ ಈ ಸೊಗಸಾದ ಐವರಿ-ಗೋಲ್ಡ್ ಕಾಂಜೀವರಂ ರೇಷ್ಮೆ ಸೀರೆಯನ್ನು ಅತ್ಯಂತ ನಿಪುಣ ಕುಶಲಕರ್ಮಿ ಆರ್. ವರಧನ್ ಅವರು ಕೈಮಗ್ಗದಲ್ಲಿ ನೇಯ್ದಿರುವುದು ವಿಶೇಷ. ಈ ಸೀರೆ ತಯಾರಿಸಲು ಅವರಿಗೆ ನಾಲ್ಕು ತಿಂಗಳು ತಗುಲಿದ್ದು, ಇದರಲ್ಲಿರುವ ಸಂಕೀರ್ಣ ಜರಿ ಕಸೂತಿ ಮತ್ತು ಅತ್ಯಂತ ನಯವಾದ ಮೇಲ್ಮೈಯು ಆ ಕುಶಲಕರ್ಮಿಯ ಕಲಾ ಪ್ರತಿಭೆಗೆ ಸಾಕ್ಷಿಯಾಗಿದೆ. ನೀತಾ ಅಂಬಾನಿ ಈ ಸೊಗಸಾದ ಸೀರೆಯನ್ನು ಸಿಂಗಲ್ ಸೆರಗು ಇಳಿಬಿಡುವ ಶೈಲಿಯಲ್ಲಿ ಉಟ್ಟು ಅದರ ಅಗಲ ಅಂಚಿನ ಮರೂನ್ ಕೆಂಪು ಬಣ್ಣಕ್ಕೆ ಹೊಂದುವ ಬ್ಲೌಸ್ ಧರಿಸಿ ಸಾಂಪ್ರದಾಯಿಕ ಮತ್ತು ಆಧುನಿಕತೆಯ ಸಂಗಮವಾದ ಸಮಕಾಲೀನ ಲುಕ್‌ನಲ್ಲಿ ನಸುನಗು ಬೀರಿದ್ದಾರೆ. ನೀತಾ ಅಂಬಾನಿ ಈ ಕಾಂಜೀವರಂ ಸೀರೆ ಜತೆಗೆ ಅತ್ಯಂತ ಬೆಲೆಬಾಳುವ ವಿಂಟೇಜ್ ಶೈಲಿಯ ಬರ್ಮಾ ರೂಬಿ ರತ್ನಖಚಿತ ಆಕರ್ಷಕ ಚಿನ್ನದ ಮಾವಿನ ಸರ, ರೂಬಿ ಮತ್ತು ಬಸ್ರಾ ಮುತ್ತಿನ ಅಪರೂಪದ ಸಂಯೋಜನೆಯಿರುವ ನವಿಲು ಆಕಾರದ ಕರ್ಣಾಭರಣ ಧರಿಸಿ ಶತಮಾನಗಳ ಕಾಲದ ಕಲೆಗಾರಿಕೆಗೆ ಜೀವಂತಿಕೆ ತುಂಬಿದ್ದಾರೆ.

ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಮೂರನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ನೀತಾ ಅಂಬಾನಿಯು ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸಿದ ಕಲಾವಿದರು ಮತ್ತು ಕಲಾಭಿಮಾನಿ ಪ್ರೇಕ್ಷಕರಿಗೆ ಹಾಗೂ ತಮ್ಮ ಈ ಕಲಾ ಪಯಣದಲ್ಲಿ ತಮಗೆ ನೆರವಾಗಿರುವ ಸಮುದಾಯಕ್ಕೆ ಧನ್ಯವಾದ ಸಮರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಸಂಖ್ಯೆ 3ರ ಸಾಂಸ್ಕೃತಿಕ ಮಹತ್ವವನ್ನು ಸಾರಿದ ಅವರು ತ್ರಿಮೂರ್ತಿ-ಬ್ರಹ್ಮ, ವಿಷ್ಣು, ಮಹೇಶ್ ಹಾಗೂ ತ್ರಿದೇವಿಯರಾದ ಸರಸ್ವತಿ, ಲಕ್ಷ್ಮಿ ಮತ್ತು ಕಾಳಿಯ ಪರಿಕಲ್ಪನೆಗಳನ್ನು ಉಲ್ಲೇಖಿಸಿದ್ದಾರೆ. ಜತೆಗೆ ಭಾರತದ ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಸರಸ್ವತಿಯ ಅಪೂರ್ವ ತ್ರಿವೇಣಿ ಸಂಗಮವು ತಮ್ಮ ಸಾಂಸ್ಕೃತಿಕ ಸಂಸ್ಥೆಯ ಮೈಲಿಗಲ್ಲಿಗೆ ಹೇಗೆ ಬೆಸೆದುಕೊಂಡಿದೆ ಎಂಬುದನ್ನು ಪ್ರಸ್ತುತಪಡಿಸಿದ್ದಾರೆ.

ಭಾರತದ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೆ ಮತ್ತು ಜಗತ್ತಿನಲ್ಲಿರುವ ಶ್ರೇಷ್ಠವಾದ ಕಲೆಗಳನ್ನು ಭಾರತಕ್ಕೆ ಪರಿಚಯಿಸುವ ಆಶ್ವಾಸನೆಯೊಂದಿಗೆ ನಿರ್ಮಾಣವಾಗಿರುವ ಈ ಸಂಸ್ಥೆಯ ಮೂಲಕ ಭಾರತೀಯ ಕಲಾವಿದರನ್ನು ಮತ್ತು ಕಲೆಯನ್ನು ಜಾಗತಿಕ ವೇದಿಕೆಗೆ ಪರಿಚಯಿಸುವ ತಮ್ಮ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದ್ದಾರೆ. ಭಾರತದ ಸಾಂಸ್ಕೃತಿಕ ಪರಂಪರೆಯು ಇನ್ನಷ್ಟು ವ್ಯಾಪಕವಾಗಿ ಹರಡಲಿ ಎಂಬ ಭರವಸೆಯನ್ನು ನೀತಾ ಅಂಬಾನಿ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !