October 16, 2026
Friday, October 16, 2026
spot_img

ಕೇಂದ್ರದಿಂದ ಕರ್ನಾಟಕಕ್ಕೆ ಅಗತ್ಯ ಸಹಕಾರ ಸಿಗ್ತಿಲ್ಲ: ರಣದೀಪ್ ಸಿಂಗ್ ಸುರ್ಜೇವಾಲಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತೀವ್ರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಬರಬೇಕಿದ್ದ ಹಕ್ಕಿನ ಅನುದಾನ ಮತ್ತು ತೆರಿಗೆ ಪಾಲನ್ನು ತಡೆದು ಕರ್ನಾಟಕದ ಮೇಲೆ ಆರ್ಥಿಕ ಅನ್ಯಾಯ ಮಾಡಲಾಗಿದೆ ಎಂದು ಕಿಡಿಕಾರಿದರು.

ರಾಜ್ಯಕ್ಕೆ ಕೃಷಿ, ನೀರಾವರಿ, ಮೂಲಸೌಕರ್ಯ ಹಾಗೂ ರಕ್ಷಣಾ ಕ್ಷೇತ್ರಗಳಿಗೆ ಅಗತ್ಯ ಅನುದಾನ ನೀಡದೆ ಕೇಂದ್ರ ಸರ್ಕಾರವು ಯೋಜಿತ ರೀತಿಯಲ್ಲಿ ಕರ್ನಾಟಕವನ್ನು ಕಡೆಗಣಿಸುತ್ತಿದೆ ಎಂದು ಅವರು ಆರೋಪಿಸಿದರು. ವಿಶೇಷವಾಗಿ 14ನೇ ಮತ್ತು 15ನೇ ಹಣಕಾಸು ಆಯೋಗದ ಅಡಿಯಲ್ಲಿ ಬರಬೇಕಿದ್ದ ಸಾವಿರಾರು ಕೋಟಿ ರೂಪಾಯಿ ಪಾಲು ರಾಜ್ಯಕ್ಕೆ ಲಭ್ಯವಾಗಿಲ್ಲ ಎಂದು ಹೇಳಿದರು.

ಜಿಎಸ್‌ಟಿ ಜಾರಿಗೆ ಬಂದ ನಂತರ ರಾಜ್ಯಕ್ಕೆ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಹೇಳಿದ ಸುರ್ಜೇವಾಲಾ, ಹೊಸ ಜಿಎಸ್‌ಟಿ ಪರಿಷ್ಕರಣೆಗಳಿಂದಲೂ ಕರ್ನಾಟಕದ ಆದಾಯಕ್ಕೆ ಮತ್ತಷ್ಟು ಹೊಡೆತ ಬಿದ್ದಿದೆ ಎಂದು ಆರೋಪಿಸಿದರು. ಜಲಜೀವನ್ ಮಿಷನ್, ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್, ನಗರಾಭಿವೃದ್ಧಿ ಯೋಜನೆಗಳು ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಬಿಡುಗಡೆಯಾಗಬೇಕಿದ್ದ ಹಣ ಇನ್ನೂ ಸಿಕ್ಕಿಲ್ಲ ಎಂದರು.

ಇದನ್ನೂ ಓದಿ:

ಇದರ ಜೊತೆಗೆ ಎತ್ತಿನಹೊಳೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಹಾಗೂ ಕಳಸಾ-ಬಂಡೂರಿ ಯೋಜನೆಗಳಿಗೆ ಕೇಂದ್ರದಿಂದ ಅಗತ್ಯ ಅನುಮತಿ ಮತ್ತು ಅನುದಾನ ದೊರಕದಿರುವುದರಿಂದ ರೈತರು ಹಾಗೂ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಉಪಚುನಾವಣೆ ನಡೆಯುತ್ತಿರುವ ಹಲವು ಜಿಲ್ಲೆಗಳಲ್ಲಿ ಈ ಯೋಜನೆಗಳು ಅತ್ಯಂತ ಮುಖ್ಯವಾಗಿದ್ದು, ಜನರ ಅಭಿವೃದ್ಧಿಯನ್ನು ತಡೆದಿರುವ ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಸುರ್ಜೇವಾಲಾ ವಾಗ್ದಾಳಿ ನಡೆಸಿದರು.

Must Read