ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತೆ ಪ್ರಾಧಿಕಾರ (ತಿದ್ದುಪಡಿ) ಬಿಲ್, ಬೆಂಗಳೂರು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ (ಎರಡನೇ ತಿದ್ದುಪಡಿ) ಮಸೂದೆ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (ತಿದ್ದುಪಡಿ) ಮಸೂದೆ ಹಾಗೂ ಬಾಂಬೆ ಸಾರ್ವಜನಿಕ ನ್ಯಾಸ ( ಕರ್ನಾಟಕ ತಿದ್ದುಪಡಿ) ವಿಧೇಯಕಗಳನ್ನು ಮಂಡನೆ ಮಾಡಲಾಯಿತು.
ವಾಹನ ನೋಂದಣಿ ವೇಳೆ ಸಂಗ್ರಹಿಸುವ ಒಂದು ಬಾರಿಯ ಸೆಸ್ನ ಗರಿಷ್ಠ ಮಿತಿ ಕೈಬಿಡುವ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತೆ ಪ್ರಾಧಿಕಾರ (ತಿದ್ದುಪಡಿ) ಬಿಲ್ ಅನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು. ಇದರ ಪ್ರಕಾರ ವಾಹನಗಳ ಮೌಲ್ಯಕ್ಕೆ ಅನುಗುಣವಾಗಿ ಸೆಸ್ ವಿಧಿಸಲು ಪ್ರಸ್ತಾಪಿಸಲಾಗಿದೆ. ಕನಿಷ್ಠ 1,000 ರೂ.ನಿಂದ ಆರಂಭವಾಗಿ ವಾಹನಗಳ ಮೌಲ್ಯಕ್ಕೆ ಅನುಗುಣವಾಗಿ ಸ್ಲ್ಯಾಬ್ ವೈಸ್ ಸೆಸ್ ವಿಧಿಸಲು ಪ್ರಸ್ತಾಪಿಸಲಾಗಿದೆ. ಈ ಹಿಂದಿನ ಕಾಯ್ದೆಯಲ್ಲಿ ವಾಹನ ನೋಂದಣಿ ಸಮಯದಲ್ಲಿ ರಾಜ್ಯ ಸರ್ಕಾರ ವಿಧಿಸುವ ‘1,000 ರೂ.ಗೆ ಹೆಚ್ಚಿರದಂಥ’ ಉಪಕರ ಎಂಬ ಪದವನ್ನು ಕೈ ಬಿಡಲಾಗಿದೆ. ಅಂದರೆ ಗರಿಷ್ಠ ಉಪಕರ ಮಿತಿಯನ್ನು ಕೈ ಬಿಡಲಾಗಿದೆ.
ಬೆಂಗಳೂರು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ (ಎರಡನೇ ತಿದ್ದುಪಡಿ) ಮಸೂದೆ ಮಂಡನೆ ಮಾಡಲಾಯಿತು. ಈ ತಿದ್ದುಪಡಿ ಮಸೂದೆಯಲ್ಲಿ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ನಿರ್ದೇಶಕರು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಖ್ಯ ನಗರ ಯೋಜಕರನ್ನು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ಸೇರಿಸಲು, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2018 (2018ರ ಕರ್ನಾಟಕ ಅಧಿನಿಯಮ 12)ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿದೆ.
ಬಾಂಬೆ ಸಾರ್ವಜನಿಕ ನ್ಯಾಸ ( ಕರ್ನಾಟಕ ತಿದ್ದುಪಡಿ) ವಿಧೇಯಕ 2025ಕ್ಕೆ ಮಂಡನೆ ಮಾಡಲಾಯಿತು. ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಇವರನ್ನು ಧರ್ಮಾದಾಯ ಆಯುಕ್ತರನ್ನಾಗಿ, ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ಜಂಟಿ ಧರ್ಮಾದಾಯ ಆಯುಕ್ತರನ್ನಾಗಿ, ಸಂಬಂಧಪಟ್ಟ ಉಪ ವಿಭಾಗದ ಉಪ ವಿಭಾಗಾಧಿಕಾರಿಯು ಉಪ ಧರ್ಮಾದಾಯ ಆಯುಕ್ತರನ್ನಾಗಿ ಮತ್ತು ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರು ಸಹಾಯಕ ಧರ್ಮಾದಾಯ ಆಯುಕ್ತರನ್ನಾಗಿ ನೇಮಿಸಲು ತಿದ್ದುಪಡಿ ಮಾಡಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

