ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯ ಸಂಘರ್ಷ ಕೊನೆಯಾಗುವ ಬದಲು ಇನ್ನಷ್ಟು ತೀವ್ರಗೊಳ್ಳುವ ಲಕ್ಷಣ ಗೋಚರಿಸುತ್ತಿದ್ದು, ಇದಕ್ಕೆ ಸಾಕ್ಷಿಯಾಗಿ ಹಾರ್ಮುಜ್ ಜಲಸಂಧಿ ಮೇಲೆ ಕಣ್ಣಿಟ್ಟಿರುವ ಅಮೆರಿಕ ಈಗ ಇರಾನ್ ಗಡಿ ಭಾಗದಲ್ಲಿ ಮತ್ತಷ್ಟು ತನ್ನ ಸೈನಿಕರನ್ನು ನಿಯೋಜಿಸಿದೆ.
ಇರಾನ್‌ನ ಸತತ ಎಚ್ಚರಿಕೆ ನಡುವೆಯೂ ಅಮೆರಿಕಾ ಈ ಹೆಜ್ಜೆಯಿರಿಸಿದ್ದು, ತನ್ನ ಜಲಸಂಧಿಯ ಕರಾವಳಿ ಭಾಗದ ಸ್ಥಳಗಳ ಮೇಲೆ ಭೂ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಇದರಲ್ಲಿ ಮುಖ್ಯವಾಗಿ ಖಾರ್ಗ್ ದ್ವೀಪ ಹಾಗೂ ಹಾರ್ಮುಜ್ ಜಲಸಂಧಿ ಮೇಲೆ ಹಿಡಿತ ಸಾಧಿಸಲು ಟ್ರಂಪ್ ಸರ್ಕಾರ ವೈಮಾನಿಕ ದಾಳಿ ನಡೆಸುತ್ತಿದೆ. ಆದರೆ ಇದಕ್ಕೆ ಇರಾನ್ ಜಗ್ಗದೇ ಇರುವ ಹಿನ್ನೆಲೆಯಲ್ಲಿ ಇದೀಗ ಭೂ ದಾಳಿಗೆ ಮುಂದಾಗಿದೆ. ಇದರ ನಡುವೆ ಅಮೆರಿಕಾ ತನ್ನ ಬೃಹತ್ ಯುದ್ಧನೌಕೆಯನ್ನು ಕೂಡಾ ನಿಯೋಜಿಸಿದ್ದು, ಸುಮಾರು 3,500 ನೌಕಾಪಡೆ ಸಿಬ್ಬಂದಿಗಳು ಮತ್ತು ನಾವಿಕರು ಆಗಮಿಸಿದ್ದಾರೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಇರಾನ್‌ನಲ್ಲಿ ಈಗ ಅಮೆರಿಕ ಸೈನಿಕರ ನಿಯೋಜನೆಯ ಬೆಳವಣಿಗೆಯ ನಡುವೆ ಉಭಯಚರ ದಾಳಿ ಹಡಗು ಯುಎಸ್‌ಎಸ್ ಟ್ರಿಪೋಲಿಗೆ ಆಗಮಿಸಿದ್ದು, ಸಂಭಾವ್ಯ ಭೀಕರ ಯುದ್ಧಕ್ಕೆ ಮುನ್ನುಡಿ ಬರೆದಂತಾಗಿದೆ.



