ಸಿಂಗ್ ಮಾರಕ ದಾಳಿಗೆ ಕಂಗಾಲಾದ ಅಮೆರಿಕ: ಟೀಂ ಇಂಡಿಯಾ ಗೆಲುವಿಗೆ 111 ಟಾರ್ಗೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಆರ್ಶದೀಪ್ ಸಿಂಗ್ ಮಾರಕ ದಾಳಿಗೆ ತತ್ತರಿಸಿದ ಆತಿಥೇಯ ಯುಎಸ್‌ಎ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿ ಟೀಂ ಇಂಡಿಯಾಗೆ ಸಾಧಾರಣ ಗುರಿ ನೀಡಿದೆ.

ಆರ್ಶದೀಪ್ ಸಿಂಗ್ 9 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಅಮೆರಿಕ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಇನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಎಡಗೈ ವೇಗಿ ಆರ್ಶದೀಪ್ ಸಿಂಗ್ ಯುಎಸ್‌ಎ ತಂಡದ ಆರಂಭಿಕ ಬ್ಯಾಟರ್ ಜಹಾಂಗೀರ್ ಅವರನ್ನು ಎಲ್‌ಬಿ ಬಲೆಗೆ ಕೆಡಹುವಲ್ಲಿ ಯಶಸ್ವಿಯಾದರು.

ಇನ್ನು ಆಂಡ್ರಿಸ್ ಗೌಸ್ ಅವರನ್ನು ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಆರ್ಶದೀಪ್ ಪೆವಿಲಿಯನ್ನಿಗಟ್ಟಿದರು.

ಎಂಟನೇ ಓವರ್‌ನಲ್ಲಿ ಯುಎಸ್‌ಎ ತಂಡದ ಅಪಾಯಕಾರಿ ಬ್ಯಾಟರ್ ಆರೋನ್ ಜೋನ್ಸ್‌(11) ಅವರನ್ನು ಬಲಿ ಪಡೆಯುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾದರು. ಮೊದಲ 10 ಓವರ್ ಅಂತ್ಯದ ವೇಳೆಗೆ ಯುಎಸ್‌ಎ ತಂಡವು 3 ವಿಕೆಟ್ ಕಳೆದುಕೊಂಡು 42 ರನ್ ಗಳಿಸಲಷ್ಟೇ ಶಕ್ತವಾಯಿತು.

ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ರಕ್ಷಣಾತ್ಮಕ ಆಟವಾಡಿದ ಆರಂಭಿಕ ಬ್ಯಾಟರ್ ಸ್ಟೀವನ್ ಟೇಲರ್ 30 ಎಸೆತಗಳನ್ನು ಎದುರಿಸಿ ಎರಡು ಸಿಕ್ಸರ್ ಸಹಿತ 24 ರನ್ ಬಾರಿಸಿ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ಕುಮಾರ್ 23 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 27 ರನ್ ಸಿಡಿಸಿ ಆರ್ಶದೀಪ್ ಸಿಂಗ್‌ಗೆ ಮೂರನೇ ಬಲಿಯಾದರು. ಇನ್ನು ಕೋರಿ ಆಂಡರ್‌ಸನ್ 14 ಹಾಗೂ ಹರ್ಮಿತ್ ಸಿಂಗ್ 10 ರನ್ ಸಿಡಿಸಿ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!