ಹೊಸದಿಗಂತ ಡಿಜಿಟಲ್ ಡೆಸ್ಕ್;
ಉಕ್ರೇನ್ ಹಾಗೂ ರಷ್ಯಾದ ಯುದ್ಧ ನಿಲ್ಲಿಸಲು ಹಾಗೂ ಶಾಂತಿಯುತವಾಗಿ ಪರಿಹರಿಸಲು ಕರೆ ನೀಡಿದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕರಡು ನಿರ್ಣಯದಲ್ಲಿ ಸೋಮವಾರ ಅಮೆರಿಕವು ರಷ್ಯಾದ ಪರವಾಗಿ ನಿಂತಿದೆ. ಈ ಹಿಂದೆ ಉಕ್ರೇನ್ ಪರವಾಗಿದ್ದ ಅಮೆರಿಕ ಇದೀಗ ಉಲ್ಟಾ ಹೊಡೆದಿದೆ.
193 ಸದಸ್ಯರ ವಿಶ್ವಸಂಸ್ಥೆ ಸಾಮಾನ್ಯಸಭೆಯು ಉಕ್ರೇನ್ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ಮಂಡಿಸಿದ ನಿರ್ಣಯದ ಮೇಲೆ ಮತ ಚಲಾಯಿಸಿದವು. ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸ್ಥಾಪಿಸಬೇಕು ಎಂಬ ಕರಡು ನಿರ್ಣಯ ಕೈಗೊಳ್ಳಲಾಗಿತ್ತು. ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ನಾಗರಿಕ ಸಮಾಜ ಒಳಗೊಂಡಂತೆ ಅಗಾಧವಾದ ವಿನಾಶ ಮತ್ತು ಮಾನವ ಸಂಕಟದಿಂದ ಗುರುತಿಸಲ್ಪಟ್ಟಿರುವ ಉಕ್ರೇನ್ ವಿರುದ್ಧದ ಯುದ್ಧದ ಆರಂಭಿಕ ನಿಲುಗಡೆ ಮತ್ತು ಶಾಂತಿ ಕಾಪಾಡಬೇಕು ಎಂಬ ನಿರ್ಣಯಕ್ಕೆ ಕರೆ ನೀಡಿದೆ.
ಜರ್ಮನಿ, ಬ್ರಿಟನ್, ಫ್ರಾನ್ಸ್ ಮತ್ತು ಜಿ7 (ಅಮೆರಿಕ ಹೊರತುಪಡಿಸಿ) ನಂತಹ ಪ್ರಮುಖ ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ 93 ದೇಶಗಳು ಪರವಾಗಿ ಮತ ಚಲಾಯಿಸಿದವು; ರಷ್ಯಾ, ಯುಎಸ್, ಇಸ್ರೇಲ್ ಮತ್ತು ಹಂಗೇರಿ ಸೇರಿದಂತೆ 18 ದೇಶಗಳು ವಿರುದ್ಧವಾಗಿ ಮತ ಚಲಾಯಿಸಿದವು. ಭಾರತ, ಚೀನಾ ಮತ್ತು ಬ್ರೆಜಿಲ್ ಸೇರಿದಂತೆ 65 ದೇಶಗಳು ಮತದಾನದಿಂದ ದೂರ ಉಳಿದಿವೆ.
ಇಲ್ಲಿಯವರೆಗೆ ರಷ್ಯಾ-ಉಕ್ರೇನ್ ಯುದ್ಧದ ಕೊನೆಯ ಮೂರು ವರ್ಷಗಳಲ್ಲಿ US ಯಾವಾಗಲೂ ಯುರೋಪಿಯನ್ನರೊಂದಿಗೆ ಮತ ಚಲಾಯಿಸುತ್ತಿತ್ತು. ಅಮೆರಿಕದಲ್ಲಿ ಬೈಡನ್ ಆಡಳಿತ ಕೊನೆಗೊಂಡು, ಟ್ರಂಪ್ ಯುಗ ಶುರುವಾದಾಗಿನಿಂದ ಉಕ್ರೇನ್ ನಿಲುವನ್ನು ವಿರೋಧಿಸಲಾಗುತ್ತಿದೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಿಯಾದ್‌ನಲ್ಲಿ ರಷ್ಯಾದೊಂದಿಗೆ ನೇರ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದು, ಉಕ್ರೇನ್ ಮತ್ತು ಯುರೋಪ್ ಮಿತ್ರ ರಾಷ್ಟ್ರಗಳನ್ನು ಹೊರಗಿಟ್ಟು ಮಾತುಕತೆ ನಡೆಸುತ್ತಿದ್ದಾರೆ.