April 7, 2026
Tuesday, April 7, 2026
spot_img

ಇರಾನ್ ಕೋಟೆಯಲ್ಲಿ ಅಮೆರಿಕದ ಸಾಹಸ: ಶತ್ರು ಪಡೆಗಳ ಕಣ್ತಪ್ಪಿಸಿ ಇಬ್ಬರು ಪೈಲಟ್‌ಗಳ ರಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ 37ನೇ ದಿನವೂ ಮುಂದುವರಿದಿದ್ದು, ಈ ಭೀಕರತೆಯ ನಡುವೆಯೇ ಅಮೆರಿಕ ಒಂದು ಅಸಾಧ್ಯವಾದ ಗುರಿಯನ್ನು ಸಾಧಿಸಿದೆ. ಇರಾನ್‌ನಲ್ಲಿ ನಾಪತ್ತೆಯಾಗಿದ್ದ ತನ್ನ ಎರಡನೇ ಫೈಟರ್ ಪೈಲಟ್‌ನನ್ನು ಅಮೆರಿಕದ ವಿಶೇಷ ಪಡೆಗಳು ಯಶಸ್ವಿಯಾಗಿ ರಕ್ಷಿಸಿವೆ. ಈ ಸಾಹಸಗಾಥೆಯನ್ನು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ.

ದಕ್ಷಿಣ ಇರಾನ್ ವಲಯದಲ್ಲಿ ಅಮೆರಿಕ ವಾಯುಪಡೆಯ ಹೆಮ್ಮೆಯ F-15E Strike Eagle ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿತ್ತು. ವಿಮಾನ ಪತನಗೊಳ್ಳುವ ಮುನ್ನವೇ ಇಬ್ಬರು ಪೈಲಟ್‌ಗಳು ಎಜೆಕ್ಟ್ ಆಗುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಅವರು ಇಳಿದಿದ್ದು ಶತ್ರು ರಾಷ್ಟ್ರವಾದ ಇರಾನ್‌ನ ನೆಲದಲ್ಲಿ. ತಕ್ಷಣ ಕಾರ್ಯಪ್ರವೃತ್ತವಾದ ಯುಎಸ್ ಪಡೆಗಳು ಮೊದಲ ಪೈಲಟ್‌ನನ್ನು ಶೀಘ್ರವಾಗಿ ಪತ್ತೆಹಚ್ಚಿದ್ದವು. ಆದರೆ ಎರಡನೇ ಪೈಲಟ್ ಪತ್ತೆ ಹಚ್ಚುವುದು ಅಮೆರಿಕಕ್ಕೆ ಸವಾಲಾಗಿತ್ತು.

ಅಮೆರಿಕ ವಾಯುಪಡೆಯ ಅಧಿಕಾರಿಗಳ ಪ್ರಕಾರ, ಇಬ್ಬರೂ ಪೈಲಟ್‌ಗಳು ಇರಾನ್ ಭದ್ರತಾ ಪಡೆಗಳ ಕಣ್ಣಿಗೆ ಮಣ್ಣೆರಚಿ ಹಲವು ಗಂಟೆಗಳ ಕಾಲ ಅಡಗಿಕೊಂಡಿದ್ದರು ಎನ್ನಲಾಗಿದೆ.

ರಕ್ಷಣಾ ಕಾರ್ಯಾಚರಣೆಯ ವೇಳೆ ಅಮೆರಿಕದ ಕಮಾಂಡೋಗಳು ಇರಾನ್ ಪಡೆಗಳ ತೀವ್ರ ವಿರೋಧ ಮತ್ತು ಗುಂಡಿನ ದಾಳಿಯನ್ನು ಎದುರಿಸಬೇಕಾಯಿತು. ಶತ್ರುಗಳ ನಡುವೆ ಸಿಲುಕಿದ್ದರೂ ಧೃತಿಗೆಡದ ಪೈಲಟ್‌ಗಳು ಮತ್ತು ಅವರನ್ನು ರಕ್ಷಿಸಲು ಹೋದ ಸೈನಿಕರು ಗಂಟೆಗಳ ಕಾಲ ಹೋರಾಟ ನಡೆಸಿ ಅಂತಿಮವಾಗಿ ಪೈಲಟ್‌ಗಳನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.

ಈ ಬಗ್ಗೆ ತಮ್ಮ ‘ಟ್ರುತ್ ಸೋಷಿಯಲ್’ ಖಾತೆಯಲ್ಲಿ ಬರೆದುಕೊಂಡಿರುವ ಟ್ರಂಪ್, “ನಮ್ಮ ಇಬ್ಬರೂ ವೀರ ಪೈಲಟ್‌ಗಳನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಅಮೆರಿಕದ ಸೇನೆಯ ಶೌರ್ಯಕ್ಕೆ ಸಾಟಿಯಿಲ್ಲ,” ಎಂದು ಸಂಭ್ರಮಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !