February 12, 2026
Thursday, February 12, 2026
spot_img

ಕಲ್ಲಿದ್ದಲು ರಫ್ತಿನಲ್ಲಿ ಅಮೆರಿಕ ನಾಗಾಲೋಟ: ಇಂಧನ ಮಾರುಕಟ್ಟೆಯಲ್ಲಿ ಹೊಸ ಸಂಚಲನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದ ಇಂಧನ ಮಾರುಕಟ್ಟೆಯಲ್ಲಿ ಅಮೆರಿಕ ಈಗ ಅಪ್ರತಿಮ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಪಾದಿಸಿದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಅಮೆರಿಕ ಇಂದು ವಿಶ್ವದ ನಂಬರ್ 1 ಇಂಧನ ಉತ್ಪಾದಕ ರಾಷ್ಟ್ರವಾಗಿದ್ದು, ಶೀಘ್ರದಲ್ಲೇ ಬೃಹತ್ ರಫ್ತುದಾರನೂ ಆಗಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ಪ್ರಮುಖ ರಾಷ್ಟ್ರಗಳೊಂದಿಗೆ ಮಾಡಿಕೊಂಡಿರುವ ಐತಿಹಾಸಿಕ ವ್ಯಾಪಾರ ಒಪ್ಪಂದಗಳು ಅಮೆರಿಕದ ಕಲ್ಲಿದ್ದಲು ರಫ್ತು ಹೆಚ್ಚಾಗಲು ಪ್ರಮುಖ ಕಾರಣವಾಗಿವೆ. “ಅಮೆರಿಕದ ಕಲ್ಲಿದ್ದಲು ವಿಶ್ವದಲ್ಲೇ ಅತ್ಯುತ್ತಮ ಗುಣಮಟ್ಟದ್ದು ಎಂಬ ನಂಬಿಕೆ ಹಲವು ದೇಶಗಳಲ್ಲಿದೆ,” ಎಂದು ಟ್ರಂಪ್ ಈ ಸಂದರ್ಭದಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಅಮೆರಿಕದ ಈ ಬೆಳವಣಿಗೆಗಳ ನಡುವೆಯೇ ಭಾರತವು ತನ್ನ ಇಂಧನ ನೀತಿಯ ಬಗ್ಗೆ ಸ್ಪಷ್ಟನೆ ನೀಡಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಭಾರತದ ನಿಲುವನ್ನು ಸ್ಪಷ್ಟಪಡಿಸುತ್ತಾ, “ನಮ್ಮ ದೇಶದ ಇಂಧನ ಖರೀದಿ ನಿರ್ಧಾರಗಳು ಕೇವಲ ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ನಿಂತಿವೆ. ನಮಗೆ ಇಂಧನದ ಸುಲಭ ಲಭ್ಯತೆ, ನ್ಯಾಯಯುತ ಬೆಲೆ ಮತ್ತು ಪೂರೈಕೆಯ ವಿಶ್ವಾಸಾರ್ಹತೆ ಮುಖ್ಯ,” ಎಂದಿದ್ದಾರೆ.

ತೈಲ ಕಂಪನಿಗಳು ಮಾರುಕಟ್ಟೆಯ ಸ್ಥಿತಿಗತಿ, ವೆಚ್ಚ ಮತ್ತು ಲಾಜಿಸ್ಟಿಕ್ಸ್ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸ್ವತಂತ್ರವಾಗಿ ಖರೀದಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂದು ಮಿಶ್ರಿ ತಿಳಿಸಿದ್ದಾರೆ. ಅಂದರೆ, ಅಮೆರಿಕದೊಂದಿಗಿನ ಒಪ್ಪಂದಗಳಿದ್ದರೂ, ಭಾರತವು ತನ್ನ ಆರ್ಥಿಕ ಲಾಭ ಮತ್ತು ಅಗತ್ಯಕ್ಕೆ ತಕ್ಕಂತೆ ಇಂಧನವನ್ನು ಆರಿಸಿಕೊಳ್ಳಲಿದೆ ಎಂಬುದು ಇಲ್ಲಿ ಗಮನಾರ್ಹ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !