ಹೊಸದಿಗಂತ ಬೆಳಗಾವಿ:
ಕುಂದಾನಗರಿ ಬೆಳಗಾವಿಯ ಮಹಾನಗರ ಪಾಲಿಕೆಯ 24ನೇ ಅವಧಿಯ ಆಡಳಿತ ಚುಕ್ಕಾಣಿ ಹಿಡಿಯುವ ಅಭ್ಯರ್ಥಿಗಳ ಆಯ್ಕೆ ಕಸರತ್ತು ಅಂತಿಮಗೊಂಡಿದೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ, ಮೇಯರ್ ಸ್ಥಾನಕ್ಕೆ ಪ್ರೀತಿ ಕಾಮಕರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಹನುಮಂತ ಕೊಂಗಾಲಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಈ ಬಾರಿಯ ಆಯ್ಕೆಯಲ್ಲಿ ಬಿಜೆಪಿ ಸಾಮಾಜಿಕ ಸಮತೋಲನಕ್ಕೆ ಒತ್ತು ನೀಡಿದೆ. ನೇಕಾರ ಸಮುದಾಯಕ್ಕೆ ಸೇರಿದ ಪ್ರೀತಿ ಕಾಮಕರ್ ಅವರು ಮೇಯರ್ ಪಟ್ಟಕ್ಕೇರುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗುತ್ತಿದೆ. ಇನ್ನು ಲಿಂಗಾಯತ ಸಮುದಾಯದ ಹನುಮಂತ ಕೊಂಗಾಲಿ ಅವರಿಗೆ ಉಪಮೇಯರ್ ಸ್ಥಾನ ನೀಡುವ ಮೂಲಕ ಪ್ರಬಲ ಸಮುದಾಯವನ್ನೂ ವಿಶ್ವಾಸಕ್ಕೆ ಪಡೆಯಲಾಗಿದೆ.
ಮೇಯರ್ ಸ್ಥಾನಕ್ಕೆ 7 ಹಾಗೂ ಉಪಮೇಯರ್ ಸ್ಥಾನಕ್ಕೆ 6 ಆಕಾಂಕ್ಷಿಗಳು ಪೈಪೋಟಿ ನಡೆಸಿದ್ದರು.
ಅಂತಿಮವಾಗಿ ಕೋರ್ ಕಮಿಟಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಒಮ್ಮತದ ಅಭ್ಯರ್ಥಿಗಳನ್ನು ಸೂಚಿಸಲಾಗಿದೆ.
ಪಾಲಿಕೆಯಲ್ಲಿ ಬಿಜೆಪಿ 40 ಸದಸ್ಯರ ಸ್ಪಷ್ಟ ಬಹುಮತ ಹೊಂದಿದ್ದು, ಕಾಂಗ್ರೆಸ್ ಕೇವಲ 24 ಸದಸ್ಯರನ್ನು ಹೊಂದಿದೆ. ವಿರೋಧ ಪಕ್ಷದವರು ಸ್ಪರ್ಧೆಗಿಳಿಯದಿದ್ದರೆ ಇವರ ಆಯ್ಕೆ ಅವಿರೋಧವಾಗುವುದು ಖಚಿತ.
ಇದೇ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಅಭಯ್ ಪಾಟೀಲ್, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗುತ್ತಿಲ್ಲ ಎಂದು ದೂರಿದರು.
“ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಪ್ರತಿ ವರ್ಷ 100 ಕೋಟಿ ರೂ. ಅನುದಾನ ನೀಡುತ್ತಿದ್ದರು. ಆದರೆ ಕಳೆದ ಐದು ವರ್ಷಗಳಿಂದ ನಗರಕ್ಕೆ ಸಮರ್ಪಕ ಹಣ ಬಂದಿಲ್ಲ. ಕಳೆದ ಎರಡೂವರೆ ವರ್ಷಗಳಿಂದ 100 ಕೋಟಿ ಬಾಕಿ ಇದೆ. ಕೇಂದ್ರದ ‘ಸ್ಮಾರ್ಟ್ ಸಿಟಿ 2’ ಯೋಜನೆಯಲ್ಲೂ 75 ಕೋಟಿ ಕಡಿತವಾಗಲು ರಾಜ್ಯ ಸರ್ಕಾರವೇ ಕಾರಣ,” ಎಂದು ಅವರು ಗಂಭೀರವಾಗಿ ಆರೋಪಿಸಿದರು.
ಬೆಳಗಾವಿ ಪಾಲಿಕೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.



