ಮಂತ್ರಾಲಯದಲ್ಲಿ 108 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಅಮಿತ್‌ ಶಾ

ಹೊಸದಿಗಂತ ವರದಿ, ರಾಯಚೂರು :

ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದಿಂದ ನಿರ್ಮಿಸಲಾಗುತ್ತಿರುವ ೧೦೮ ಅಡಿಯ ಎತ್ತರ ಶ್ರೀರಾಮದೇವರ ಪಂಚಲೋಹದ ಮೂರ್ತಿ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರ್ಚ್ಯುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.

ಭಾನುವಾರ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದ ಆವರಣದಲ್ಲಿ ಜರುಗಿದ ಶಿಲನ್ಯಾಸ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರ್ಚುವಲ್ ಮುಖಾಂತರ ಪಾಲ್ಗೊಂಡು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಹಿಂದೂ ಸಂಸ್ಕೃತದಲ್ಲಿ ೧೦೮ ಸಂಖ್ಯೆ ಅತ್ಯಧಿತ ಪವಿತ್ರವಾಗಿದೆ. ೧೦೮ ಅಡಿ ಉದ್ದದಲ್ಲಿ ಶ್ರೀರಾಮನ ಪಂಚಲೋಹದ ಮೂರ್ತಿ ನಿರ್ಮಿಸಲು ಮಂತ್ರಾಲಯದ ಮಠವು ಮುಂದಾಗಿದೆ, ಪರಮ ಪವಿತ್ರವಾದ ತುಂಗಾಭದ್ರಾ ನದಿ ತಟದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳು ನೆಲೆಸಿದ್ದಾರೆ. ಇದೇ ನದಿಯ ಹಂಚಿನಲ್ಲಿ ಇದೀಗ ಶ್ರೀರಾಮ ದೇವರ ೧೦೮ ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮೂರ್ತಿ ಸನಾತನ ಧರ್ಮವನ್ನು ಎಲ್ಲೆಡೆ ಪಸರಿಸಲಿ, ವೈಷ್ಣವ ಪರಂಪರತೆಯನ್ನು ಬೆಳಗಲಿ ಎಂದು ಆಶೀಸುವುದಾಗಿ ತಿಳಿಸಿದರು.

ನಂತರ ಅನುಗ್ರಹ ಸಂದೇಶ ನೀಡಿದ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು, ಮರ್ಯಾದ ಪುರುಷೋತ್ತಮ ದಂಢಕಾರಾಣ್ಯ ವಾಸದ ಅವರ ಪಾದಸ್ಪರ್ಶದಿಂದ ಈ ಪ್ರದೇಶ ಪವಿತ್ರಗೊಂಡಿದೆ. ಅವರು ಕುಳಿತುಕೊಂಡ ಶಿಲೆಯಲ್ಲಿಯೇ ಶ್ರೀರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನವನ್ನು ನಿರ್ಮಿಸಲಾಗಿದೆ. ಶ್ರೀರಾಘವೇಂದ್ರ ಸ್ವಾಮಿಗಳ ಆರಾಧ್ಯದೈವರಾದ ಶ್ರೀರಾಮಚಂದ್ರರ ೧೦೮ ಅಡಿ ಎತ್ತರದ ಪಂಚಲೋಹ ಮೂರ್ತಿ ನಿರ್ಮಾಣವನ್ನು ಕೈಗೊಳ್ಳಲಾಗಿದೆ. ಭವ್ಯವಾದ ಮೂರ್ತಿ, ಮಂದಿರ, ಸುತ್ತಲು ಉದ್ಯಾನವನ ಹಾಗೂ ಸನಾತನ ಧರ್ಮ, ಹಿಂದೂ ಸಂಸ್ಕೃತಿಯನ್ನು ಬಿಂಬಿಸುವ ಕಟ್ಟಡವನ್ನು ನಿರ್ಮಿಸಲು ಸಂಕಲ್ಪಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಂಧ್ರದ ಸಚಿವ ಗುಮ್ಮನೂರು ಜಯರಾಂ, ಮಾಜಿ ಸಂಸದ ಟಿ.ಜಿ.ವೆoಕಟೇಶ, ಶ್ರೀಮಠದ ವಿದ್ವಾಂಸರು, ಪಂಡಿತರು, ಅಧಿಕಾರಿ, ಸಿಬ್ಬಂದಿ ಹಾಗೂ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಭಕ್ತರು ಭಾಗವಹಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!