ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೀತಾ ದೇವಿಯ ಜನ್ಮಸ್ಥಳವೆಂದು ಪರಿಗಣಿಸಲಾದ ಬಿಹಾರದ ಸೀತಾಮರ್ಹಿ ಜಿಲ್ಲೆಯ ಪುನೌರಾಧಂನಲ್ಲಿರುವ ಜಾನಕಿ ಮಂದಿರದ ಪುನರಾಭಿವೃದ್ಧಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
67 ಎಕರೆ ವ್ಯಾಪ್ತಿಯಲ್ಲಿರುವ ದೇವಸ್ಥಾನದ ಕಾಮಗಾರಿಯನ್ನು 11 ತಿಂಗಳೊಳಗೆ ಪೂರ್ಣಗೊಳಿರುವ ಸಾಧ್ಯತೆಯಿದ್ದು, 882 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಲಾಗಿದೆ.
ಶಿಲಾನ್ಯಾಸ ಸಮಾರಂಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಹಲವಾರು ಕೇಂದ್ರ ಸಚಿವರು ಮತ್ತು ಇತರ ಗಣ್ಯರು ಭಾಗವಹಿಸಿದ್ದರು.
ಒಟ್ಟು ಮೊತ್ತದಲ್ಲಿ 137 ಕೋಟಿ ರೂ.ಗಳನ್ನು ಹಳೆಯ ದೇವಾಲಯ ಮತ್ತು ಅದರ ಆವರಣದ ಅಭಿವೃದ್ಧಿಗೆ ಖರ್ಚು ಮಾಡಲಾಗುವುದು, 728 ಕೋಟಿ ರೂ.ಗಳನ್ನು ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳಿಗೆ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, 10 ವರ್ಷಗಳ ಕಾಲ ಸಮಗ್ರ ನಿರ್ವಹಣೆಗೆ 16 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು ಎಂದು ಅಮಿತ್ ಶಾ ಹೇಳಿದರು.
ಬಿಹಾರ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (BSTDC) ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ. ರಾಜ್ಯ ಸರ್ಕಾರವು ಇತ್ತೀಚೆಗೆ ದೇವಾಲಯದ ನಿರ್ಮಾಣ ಮತ್ತು ಪುನರಾಭಿವೃದ್ಧಿಗಾಗಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಒಂಬತ್ತು ಸದಸ್ಯರ ಟ್ರಸ್ಟ್ ಅನ್ನು ರಚಿಸಿತು.