ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ 12 ಜಿಲ್ಲೆಗಳಲ್ಲಿದ್ದ ನಕ್ಸಲಿಸಂ ಈಗ ಆರು ಜಿಲ್ಲೆಗಳಿಗೆ ಇಳಿದಿದೆ. ಪ್ರಧಾನಿ ಮೋದಿ ಸರ್ಕಾರ ಸಶಕ್ತ, ಸುರಕ್ಷಿತ ಮತ್ತು ಸಮೃದ್ಧ ಭಾರತ ನಿರ್ಮಿಸುವ ಪಣ ತೊಟ್ಟಿದೆ. ಈ ಉದ್ದೇಶದಿಂದ ನಕ್ಸಲರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಕ್ಸಲ್‌ಮುಕ್ತ ಭಾರತ ನಿರ್ಮಾಣದತ್ತ ನಾವು ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ಇಂದು ಎಡಪಂಥೀಯ ಉಗ್ರವಾದದಿಂದ ಹೆಚ್ಚು ಪ್ರಭಾವಿತವಾಗಿರುವ ಜಿಲ್ಲೆಗಳ ಸಂಖ್ಯೆ 12ರಿಂದ ಕೇವಲ 6ಕ್ಕೆ ಇಳಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ್ದೇವೆ’ ಎಂದಿದ್ದಾರೆ.
2026ರ ಮಾರ್ಚ್ 31ರ ವೇಳೆಗೆ ದೇಶದಿಂದ ನಕ್ಸಲಿಸಂ ಅನ್ನು ಬೇರುಸಹಿತ ಕಿತ್ತೊಗೆಯಲು ನಿರ್ಧರಿಸಲಾಗಿದೆ ಎಂದು ಶಾ ಹೇಳಿದರು.
ಕೇಂದ್ರ ಗೃಹ ಸಚಿವಾಲಯದ ದತ್ತಾಂಶದ ಪ್ರಕಾರ, ಎಡ ಪಂಥೀಯ ಉಗ್ರವಾದದ ಪರಿಣಾಮಕ್ಕೆ ಒಳಗಾದ ಜಿಲ್ಲೆಗಳೆಂದರೆ, ನಕ್ಸಲ್ ಚಟುವಟಿಕೆಗೆ ಒಳಗಾದ ಮತ್ತು ಹಿಂಸಾಚಾರ ಮುಂದುವರೆದಿರುವ ಜಿಲ್ಲೆಗಳಾಗಿವೆ.ಎಡಪಂಥೀಯ ಉಗ್ರವಾದಪೀಡಿತ ಜಿಲ್ಲೆಗಳನ್ನು 2015ರಲ್ಲಿ ಅತ್ಯಂತ ಪೀಡಿತ ಜಿಲ್ಲೆಗಳು ಮತ್ತು 2021ರಲ್ಲಿ ಕಳವಳಕಾರಿ ಜಿಲ್ಲೆಗಳು ಎಂಬ ಪರಿಭಾಷೆಯಲ್ಲಿ ವರ್ಗೀಕರಿಸಲಾಗಿತ್ತು. ಈ ಹಿಂದೆ ಅತ್ಯಂತ ಪೀಡಿತ ಜಿಲ್ಲೆಗಳಲ್ಲಿ 12 ಜಿಲ್ಲೆಗಳಿದ್ದವು. ಕೇಂದ್ರದ ದಾಖಲೆಗಳ ಪ್ರಕಾರ 2015ರಲ್ಲಿ 35 ಜಿಲ್ಲೆಗಳಿದ್ದರೆ, 2018ರಲ್ಲಿ 30 ಮತ್ತು 2021ರಲ್ಲಿ 25 ಜಿಲ್ಲೆಗಳಿದ್ದವು ಎಂದು ಹೇಳಿದ್ದಾರೆ.