ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶನಿವಾರ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಹಲವು ಕಾರ್ಯಕ್ರಮಗಳ ಪೈಕಿ ಅಮೃತ ಭಾರತ್ ರೈಲುಗಳ ಲೋಕಾರ್ಪಣೆಯೂ ಮುಖ್ಯ ವಿದ್ಯಮಾನ.
ಪಶ್ಚಿಮ ಬಂಗಾಳದ ಮಾಲ್ಡಾ ಹಾಗೂ ಬೆಂಗಳೂರನ್ನು ಬೆಸೆಯುವ ಮಾರ್ಗ, ಬಿಹಾರದ ದರ್ಭಾಂಗಾದಿಂದ ಅಯೋಧ್ಯೆಯನ್ನು ಬಳಸಿಕೊಂಡು ದೆಹಲಿ ತಲುಪಿಕೊಳ್ಳುವ ಮಾರ್ಗ ಇವೆರಡರಲ್ಲಿ ಅಮೃತ ಭಾರತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದಾರೆ.
ವೇಗ ಮತ್ತು ಸುಖಾಸೀನದ ಸೌಕರ್ಯಗಳಿಗಾಗಿ ಅದಾಗಲೇ ವಂದೇ ಭಾರತ್ ಟ್ರೈನ್ ಇರುವಾಗ, ಮತ್ತೇನಿದು ಅಮೃತ ಭಾರತ್ ರೈಲು ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಿದೆಯಾ? ಈ ನಿಟ್ಟಿನಲ್ಲಿ ಎರಡು ಮುಖ್ಯ ವ್ಯತ್ಯಾಸಗಳನ್ನು ಹೇಳಬಹುದಾಗಿದೆ.
ವಂದೇ ಭಾರತ್ ರೈಲು ಹವಾನಿಯಂತ್ರಿತ ರೈಲುಸೇವೆಯ ವಿಭಾಗದಲ್ಲಿ ಬರುವ ಲಕ್ಸುರಿ ಪರಿಕಲ್ಪನೆಯ ಟ್ರೈನ್. ಅಮೃತ ಭಾರತ್ ಟ್ರೈನ್ ಹವಾನಿಯಂತ್ರಿತವಲ್ಲದ ರೈಲುಸೇವೆಯ ವಿಭಾಗದಲ್ಲಿ ಉತ್ತಮ ದರ್ಜೆಯ ರೈಲನ್ನು ಪರಿಚಯಿಸುತ್ತಿದೆ.
ಅಮೃತ ಭಾರತ್ ರೈಲಿನ ತಂತ್ರಜ್ಞಾನವೂ ನವೀನವಾಗಿದೆ. ಅದೇ ಪುಶ್ ಆ್ಯಂಡ್ ಪುಲ್ ಟೆಕ್ನಾಲಜಿ. ಹೆಸರೇ ಹೇಳುವ ಹಾಗೆ ಎಳೆಯುವ ಮತ್ತು ನೂಕುವ ಎರಡೂ ಶಕ್ತಿಗಳನ್ನು ಬಳಸಿಕೊಳ್ಳುವಂಥ ತಂತ್ರಜ್ಞಾನ.
ಸಾಮಾನ್ಯ ರೈಲಿನಲ್ಲಿ ಅದು ಹೋಗಬೇಕಾದ ದಿಕ್ಕಿನಲ್ಲಿ ಎಂಜಿನ್ ತಂದು ಜೋಡಿಸುವ ವ್ಯವಸ್ಥೆ ಇರುತ್ತದೆ. ಅದು ಎಲ್ಲ ಬೋಗಿಗಳನ್ನು ಎಳೆದುಕೊಂಡು ಹೋಗುತ್ತೆದೆಯಷ್ಟೆ. ಈ ಅಮೃತ ಭಾರತ ಟ್ರೈನ್ ನಲ್ಲಿ ಬೋಗಿಗಳ ಎರಡೂ ತುದಿಗಳಲ್ಲಿ ಎಂಜಿನ್ನುಗಳಿರುತ್ತವೆ.
ಯಾವ ದಿಕ್ಕಿಗೆ ರೈಲು ಹೋಗಲಿಕ್ಕಿದೆಯೋ ಆ ಭಾಗದ ಎಂಜಿನ್ ಎಳೆಯುವ ಕೆಲಸವನ್ನು ಮಾಡಿದರೆ, ಹಿಂದುಗಡೆ ಮತ್ತೊಂದು ತುದಿಯಲ್ಲಿರುವ ಎಂಜಿನ್ ನೂಕುವ ಕೆಲಸವನ್ನು ಮಾಡುತ್ತೆ. ಇದರಿಂದ ರೈಲಿನ ವೇಗದ ಸಾಮರ್ಥ್ಯ ಪರಿಣಾಮಕಾರಿಯಾಗಿ ಹೆಚ್ಚಾಗಲಿದೆ. ಇದಕ್ಕೆ ತಕ್ಕ ಹಾಗೆ ಹೆಚ್ಚಿನ ಕುಲುಕಾಟಗಳಿಲ್ಲದೇ ಸಾಗುವ ಹಾಗೆ ಬೋಗಿಗಳನ್ನು ರೂಪಿಸಲಾಗಿದೆ.
ಉಳಿದಂತೆ, ಆಕರ್ಷಕ ಸೀಟ್ ವಿನ್ಯಾಸ, ಲಗೇಜ್ ಇಡುವುದಕ್ಕೆ ಉತ್ತಮ ವ್ಯವಸ್ಥೆ, ಹೊಸಮಾದರಿಯ ಶೌಚಾಲಯಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಎಲ್ ಇ ಡಿ ದೀಪಗಳು…ಇಂಥ ಎಲ್ಲ ಸೌಕರ್ಯಗಳನ್ನೂ ಅಮೃತ ಭಾರತ್ ಟ್ರೈನ್ ಹೊಂದಿದೆ.