ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರೋ ಭಾರತವು ಇಂದು ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಇದಕ್ಕೆ ಕಾರಣವಾದ ಹಲವಾರು ಅಂಶಗಳಲ್ಲಿ ವಿದೇಶಿ ಬಂಡವಾಳವೂ ಒಂದು. 1990ರ ದಶಕದವರೆಗೂ ಭಾರತದ ಆರ್ಥಿಕತೆಯು ವಿದೇಶಿ ಹೂಡಿಕೆಗಳಿಗೆ ಮುಕ್ತವಾಗಿರಲಿಲ್ಲ. ಆದರೆ ಅಂದು ಜಾರಿಗೊಳಿಸಿದ ಉದಾರೀಕರಣ, ಖಾಸಗೀಕರಣ, ಮತ್ತು ಜಾಗತೀಕರಣ (L,P,G) ನೀತಿಗಳು ಭಾರತವನ್ನು ವಿದೇಶಿ ಬಂಡವಾಳಕ್ಕೆ ಮುಕ್ತವನ್ನಾಗಿಸಿತು.
ಇದರ ನಂತರದಲ್ಲಿ ಅಲ್ಪ ಪ್ರಮಾಣದಲ್ಲಿ ವಿದೇಶಿ ಬಂಡವಾಳವು ಹರಿದುಬಂತಾದರೂ ವಿದೇಶಿ ಬಂಡವಾಳ ಹೂಡಿಕೆಯು ಗಣನೀಯವಾಗಿ ಹೆಚ್ಚಳವಾಗಿದ್ದು 2014ರ ನಂತರವೇ ಎಂದರೆ ತಪ್ಪಾಗಲಾರದು. ಮೋದಿ ಸರ್ಕಾರ ಹೂಡಿಕೆ ಕ್ಷೇತ್ರಕ್ಕೆ ನೀಡಿದ ಉತ್ತೇಜನ , ವಿದೇಶಿನ ನೇರ ಬಂಡವಾಳ ಹೂಡಿಕೆಯಲ್ಲಿ ಕೈಗೊಂಡ ಉದಾರೀಕರಣ ನೀತಿಗಳು ವಿದೇಶಿ ಬಂಡವಾಳ ಹೂಡಿಕೆಯ ಹೆಚ್ಚಳಕ್ಕೆ ಕಾರಣವಾಯಿತು. 2000-2001ರ ಸಮಯದಲ್ಲಿ 4.02 ಬಿಲಿಯನ್ ಡಾಲರ್ ಗಳಷ್ಟು ವಿದೇಶಿ ಬಂಡವಾಳ ಹೂಡಿಕೆಯಾಗಿತ್ತು. ನಂತರದಲ್ಲಿ ತೆಗೆದಕೊಂಡ ಸುಧಾರಣೆಗಳಿಂದ ಈ ಹೂಡಿಕೆಯ ಪ್ರಮಾಣ ಗಣನೀಯವಾಗಿ ಏರಿತು. 2021-22ರಲ್ಲಿ ಬರೋಬ್ಬರಿ 83.57 ಬಿಲಿಯನ್ ಡಾಲರುಗಳಷ್ಟು ವಿದೇಶಿ ಬಂಡವಾಳ ಹರಿದು ಬಂದಿದೆ. ಚೀನಾದಂತಹ ಉತ್ಪಾದನಾ ಕೇಂದ್ರಗಳು ಕೋವಿಡ್ ನಿಂದಾಗಿ ವಿಫಲಾವಾಗುತ್ತಿದ್ದು ಜಗತ್ತು ಭಾರತವನ್ನು ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲು ಆಯ್ದುಕೊಳ್ಳುತ್ತಿದೆ. ಇದಲ್ಲದೇ ಭಾರತ ಸರ್ಕಾರ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೈಗೊಳ್ಳುತ್ತಿರುವ ಉಪಕ್ರಮಗಳು ಭಾರತಕ್ಕೆ ವಿದೇಶಿ ಬಂಡವಾಳ ಹೂಡಿಕೆಯನ್ನು ಹೊತ್ತು ತರುತ್ತಿದೆ.