ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಚ್ಚಿಯಿಂದ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ಸ್ವಲ್ಪದರಲ್ಲಿಯೇ ಪಾರಾಗಿದೆ.
ಮುಂಬೈ ಏರ್ಪೋರ್ಟ್ನಲ್ಲಿ ಇಳಿಯುವಾಗ ಎ320 ವಿಮಾನವು ಸ್ಕಿಡ್ ಆಗಿದೆ. ತೀವ್ರ ಮಳೆಯಿಂದಾಗಿ ಜಾರುವ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಸದ್ಯ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ವಿಮಾನಕ್ಕೆ ಕೊಂಚ ಮಟ್ಟಿಗಿನ ಹಾನಿ ಎದುರಾಗಿದೆ ಎಂದು ಹೇಳಲಾಗಿದೆ.
ಕೊಚ್ಚಿಯಿಂದ ಆಗಮಿಸುತ್ತಿರುವ ವಿಮಾನವು ಜುಲೈ 21 ರಂದು ಬೆಳಗ್ಗೆ 9.27 ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (CSMIA) ಇಳಿಯಿತು. ನಂತರ ಪರಿಸ್ಥಿತಿಯನ್ನು ನಿರ್ವಹಿಸಲು ತುರ್ತು ಪ್ರತಿಕ್ರಿಯೆ ತಂಡಗಳನ್ನು ತಕ್ಷಣವೇ ಸಕ್ರಿಯಗೊಳಿಸಲಾಯಿತು. ಘಟನೆಯ ನಂತರ ವಿಮಾನವನ್ನು ಸುರಕ್ಷಿತವಾಗಿ ಗೇಟ್‌ಗೆ ಕರೆದೊಯ್ಯಲಾಯಿತು ಎಂದು ಏರ್ ಇಂಡಿಯಾ ತಿಳಿಸಿದೆ.
ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ವಿಮಾನ ನಿಲ್ದಾಣದ ಪ್ರಾಥಮಿಕ ರನ್‌ವೇಗೆ ಸಣ್ಣಪುಟ್ಟ ಹಾನಿಗಳು ವರದಿಯಾಗಿವೆ.ಮುಂದಿನ ಎರಡು ದಿನಗಳಲ್ಲಿ ಮುಂಬೈ ನಿವಾಸಿಗಳು ಮತ್ತಷ್ಟು ಮಳೆ ಎದುರಿಸಲು ಸಿದ್ಧರಾಗಬೇಕು. ಮುಂದಿನ 48 ಗಂಟೆಗಳಲ್ಲಿ ಮಳೆ ಇನ್ನಷ್ಟು ತೀವ್ರವಾಗುವ ನಿರೀಕ್ಷೆಯಿದೆ ಮತ್ತು ಬಲವಾದ ಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.