ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾವಣಗೆರೆ ಜಿಲ್ಲೆಯ ಕೆರೆಯಲ್ಲಿ ವಿಜಯನಗರ ಕಾಲದ ಪ್ರಾಚೀನ ಶಿಲಾ ಶಿಲ್ಪ ಪತ್ತೆಯಾಗಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ಹೊರವಲಯದ ಹೊಸಕೆರೆಯಲ್ಲಿ ವಿಗ್ರಹ ಪತ್ತೆಯಾಗಿದೆ.
ಮೊದಲ ನೋಟದಲ್ಲಿ, ಈ ಶಿಲ್ಪವು ಭೈರವ, ಕಾಳಿ ಮತ್ತು ವೀರಭದ್ರನ ಶಿಲ್ಪಗಳಿಗೆ ಹೊಂದಿಕೆಯಾಗುವಂತೆ ತೋರುತ್ತದೆ. ಇದನ್ನು ಕಪ್ಪು ಕಲ್ಲಿನಿಂದ ಕೆತ್ತಲಾಗಿದ್ದು, ವಿಜಯನಗರ ಕಾಲದ್ದು ಎನ್ನಲಾಗಿದೆ.
ಚತುರ್ಭುಜಗಳಿದ್ದು, ಬಲ ಭಾಗದ ಮುಂಗೈನಲ್ಲಿ ಖಡ್ಗ, ಮೇಲ್ಮುಖವಾಗಿ ಭುಜದ ಮೇಲಿದೆ. ಬಲಭಾಗದ ಇನ್ನೊಂದು ಕೈಯಲ್ಲಿ ತ್ರಿಶೂಲವಿದ್ದು ಎಡಗೈಯೊಂದು ಭಗ್ನಗೊಂಡಿದೆ. ಇನ್ನೊಂದು ಕೈಯಲ್ಲಿ ಪಾಶವಿರುವಂತ ಲಕ್ಷಣ ಶಿಲ್ಪದಲ್ಲಿ ಕಂಡುಬಂದಿದೆ. ಶಿರದ ಎಡ, ಬಲ ಭಾಗದಲ್ಲಿ ಸೂರ್ಯ ಚಂದ್ರರ ಕೆತ್ತನೆ ಇದೆ. ಶಿಲ್ಪದ ಮೇಲೆ ಯಾವುದೇ ವಿವರಣೆಯಿಲ್ಲ. ಇದು ಯಾವ ಆಳ್ವಿಕೆಯ ಅವಧಿ ಮತ್ತು ಅದನ್ನು ಏಕೆ ಕೆತ್ತಿಸಲಾಗಿತ್ತು. ಕೆತ್ತಿದ್ದು ಯಾರು ಎಂಬುದನ್ನು ಕಂಡುಹಿಡಿಯಬೇಕಿದೆ.