ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಚಿತ್ರರಂಗದ ಪ್ರಮುಖ ಕುಟುಂಬಗಳಲ್ಲಿ ಒಂದಾದ ಅಕ್ಕಿನೇನಿ ಕುಟುಂಬ ಮತ್ತು ರಾಜಕೀಯ ವಲಯದ ನಡುವಿನ ಸಂಘರ್ಷವೊಂದು ಇದೀಗ ಮುಕ್ತಾಯದ ಹಂತ ತಲುಪಿದೆ. ನಟ ಹಾಗೂ ಉದ್ಯಮಿ ಅಕ್ಕಿನೇನಿ ನಾಗಾರ್ಜುನ ಅವರ ಕುಟುಂಬದ ಕುರಿತು ನೀಡಿದ್ದ ಹೇಳಿಕೆಗಾಗಿ ತೆಲಂಗಾಣದ ಅರಣ್ಯ ಮತ್ತು ಪರಿಸರ ಖಾತೆ ಸಚಿವೆ ಕೊಂಡ ಸುರೇಖ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಇತ್ತೀಚೆಗೆ ತಮ್ಮ ಬಿಡುಬೀಸು ಮಾತುಗಳಿಂದ ಆಗಾಗ್ಗೆ ವಿವಾದದ ಕೇಂದ್ರಬಿಂದುವಾಗುವ ಸಚಿವೆ ಕೊಂಡ ಸುರೇಖ ಅವರು, ನಿನ್ನೆ ತಡರಾತ್ರಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪತ್ರವೊಂದನ್ನು ಪ್ರಕಟಿಸಿದ್ದಾರೆ. ಈ ಪತ್ರದಲ್ಲಿ, ಅವರು ನಾಗಾರ್ಜುನ ಅವರ ಕುಟುಂಬಕ್ಕೆ ಔಪಚಾರಿಕವಾಗಿ ಕ್ಷಮೆ ಕೇಳಿರುವುದಲ್ಲದೆ, ಹಿಂದೆ ನೀಡಿದ್ದ ತಮ್ಮ ಹೇಳಿಕೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ.
ವಿವಾದದ ಮೂಲವೇನು?
ವಿವಾದಕ್ಕೆ ಕಾರಣವಾಗಿದ್ದು 2024ರಲ್ಲಿ ಸಚಿವೆ ಕೊಂಡ ಸುರೇಖ ನೀಡಿದ್ದ ಹೇಳಿಕೆಗಳು. ನಟ ನಾಗಾರ್ಜುನ ಅವರ ಪುತ್ರ ನಾಗ ಚೈತನ್ಯ ಮತ್ತು ನಟಿ ಸಮಂತಾ ಅವರ ವಿಚ್ಛೇದನದ ಕುರಿತು ಮಾತನಾಡಿದ್ದ ಸುರೇಖ ಅವರು, ಈ ಇಬ್ಬರ ದೂರಾಗುವಿಕೆಗೆ ವಿಪಕ್ಷ ನಾಯಕ ಕೆಟಿಆರ್ ಕಾರಣ ಎಂದು ಆರೋಪಿಸಿದ್ದರು. ಮಾಧ್ಯಮಗಳ ಎದುರು ಮಾತನಾಡಿದ್ದ ಅವರು, ಕೆಟಿಆರ್ ಮತ್ತು ಸಮಂತಾ ನಡುವೆ ಸಂಬಂಧವಿತ್ತು ಎಂಬ ಅರ್ಥ ಬರುವಂತೆ ಹೇಳಿಕೆ ನೀಡಿದ್ದರು. ಇದರ ಜೊತೆಗೆ, ನಟ ನಾಗಾರ್ಜುನ ಅವರ ವಿರುದ್ಧವೂ ಕೆಲವು ಅಕ್ರಮಗಳ ಆರೋಪಗಳನ್ನು ಮಾಡಿದ್ದರು.
ಈ ಹೇಳಿಕೆಗಳು ತೀವ್ರ ವಿರೋಧಕ್ಕೆ ಗುರಿಯಾದವು. ವಿರೋಧದ ನಡುವೆ, “ನಾನು ಕೆಟಿಆರ್ ಅವರನ್ನು ಟೀಕಿಸುವ ಭರದಲ್ಲಿ ಸಮಂತಾ ಮನಸ್ಸಿಗೆ ಘಾಸಿ ಮಾಡಿದ್ದೇನೆ” ಎಂದು ಆಗಲೇ ಸುರೇಖ ಕ್ಷಮೆ ಕೇಳಿದ್ದರು. ಆದರೆ, ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ನಟ ನಾಗಾರ್ಜುನ ಅವರು, ಸುರೇಖ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅದೇ ರೀತಿ, ಬಿಆರ್ಎಸ್ ಪಕ್ಷದ ನಾಯಕ ಕೆಟಿಆರ್ ಕೂಡ ಈ ಸಂಬಂಧ ಪ್ರಕರಣ ದಾಖಲಿಸಿದ್ದರು.
ಒಂದು ವರ್ಷದ ನಂತರ ರಾಜಿ
ಪ್ರಕರಣ ದಾಖಲಾಗಿ ಸುಮಾರು ಒಂದು ವರ್ಷದ ನಂತರ, ಇದೀಗ ಸಚಿವೆ ಕೊಂಡ ಸುರೇಖ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ರಾಜಕೀಯ ನಾಯಕರಿಂದ ಬರುವ ಇಂತಹ ಹೇಳಿಕೆಗಳು ಮತ್ತು ಸಿನೆಮಾ ತಾರೆಯರ ವೈಯಕ್ತಿಕ ಜೀವನದ ಮೇಲಿನ ಪ್ರಭಾವದ ಕುರಿತು ಈ ಘಟನೆ ಮತ್ತೊಮ್ಮೆ ಬೆಳಕು ಚೆಲ್ಲಿದೆ. ನಾಗ ಚೈತನ್ಯ ಮತ್ತು ಸಮಂತಾ ಅವರು 2017ರಲ್ಲಿ ವಿವಾಹವಾಗಿ, 2021ರಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದಿದ್ದರು. ಇವರ ವಿಚ್ಛೇದನದ ಹಿಂದೆ ರಾಜಕಾರಣಿಯೊಬ್ಬರ ಕೈವಾಡವಿದೆ ಮತ್ತು ಫೋನ್ ಟ್ಯಾಪಿಂಗ್ ಪ್ರಕರಣಕ್ಕೂ ಸಂಬಂಧವಿದೆ ಎಂಬ ವದಂತಿಗಳು ಆಗ ಹರಿದಾಡಿದ್ದವು.

