ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ನಡೆದ ರೋಡ್ ರೇಜ್ ಪ್ರಕರಣದಲ್ಲಿ ಮಹತ್ವದ ಟ್ವಿಸ್ಟ್ ದೊರೆತಿದ್ದು, ಪೊಲೀಸರು ಇದೀಗ ವಿಂಗ್ ಕಮಾಂಡರ್ ಬೋಸ್ ವಿರುದ್ಧವೇ ಹತ್ಯಾ ಪ್ರಯತ್ನ ಕೇಸ್ ದಾಖಲಿಸಿದ್ದಾರೆ.
ವಿಂಗ್ ಕಮಾಂಡರ್ ಬೋಸ್ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಆರಂಭದಲ್ಲಿ ಕನ್ನಡ ಭಾಷಾ ವಿಷಯಕ್ಕಾಗಿ ನಡೆದ ಜಗಳ ಎಂದು ವೈರಲ್ ಆಗಿತ್ತಾದರೂ ಬಳಿಕ ಕಾರು, ಬೈಕಿನ ನಡುವೆ ಡಿಕ್ಕಿಯಾಗಿದ್ದರಿಂದ ಈ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಆದರೆ ವಿಷಯ ಬೇರೆಯೇ ಇದೆ!
ವಿಂಗ್ ಕಮಾಂಡರ್ ಸ್ವತಃ ವಿಡಿಯೋ ಮೂಲಕ ತನ್ನ ಮೇಲೆ ಕನ್ನಡಿಗನೊಬ್ಬ ಹಲ್ಲೆ ನಡೆಸಿದ್ದಾಗಿ ಹೇಳಿಕೊಂಡಿದ್ದ. ಮುಖಕ್ಕೆ ರಕ್ತ ಬರಿಸಿಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ. ಇದನ್ನೇ ನಂಬಿದ ಪೊಲೀಸರು, ಯುವಕನ ವಿರುದ್ಧ ಎಫ್ಐಆರ್ ದಖಲಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದರು.
ಈ ಪ್ರಕರಣ ವೈರಲ್ ಆಗುತ್ತಲೇ ಸಿಸಿಟಿವಿ ವಿಡಿಯೋ ವೈರಲ್ ಆಗಿದ್ದು, ಇದೇ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದೆ. ಸ್ಥಳದಲ್ಲಿನ ಸಿಸಿಟಿವಿಯಲ್ಲಿ ಬೋಸ್ನ ಸುಳ್ಳು ಆಟ ಬಟಾಬಯಲಾಗಿದ್ದು, ಸಿಸಿಟಿವಿ ದೃಶ್ಯದಲ್ಲಿ ಯುವಕ ಹಲ್ಲೆ ಮಾಡಿಲ್ಲ. ಬದಲಾಗಿ ವಿಂಗ್ ಕಮಾಂಡ್ ಬೋಸ್ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯರು ಎಷ್ಟೇ ಬಿಡಿಸಲು ಪ್ರಯತ್ನಿಸಿದ್ದರೂ ಸಹ ಕೇಳದ ಬೊಸ್ ಯುವಕನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾನೆ. ಯುವಕ ನೆಲಕ್ಕೆ ಬಿದ್ದರೂ ಸಹ ಕೇಳದೇ ಮನಬಂದಂತೆ ಥಳಿಸಿದ್ದಾನೆ. ಅಲ್ಲದೇ ಯುವಕನ ಮೊಬೈಲ್ಕಿತ್ತುಕೊಂಡು ಎಸೆದಿದ್ದಾನೆ.
ಈ ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಪೊಲೀಸರು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಬಿಎನ್‌ಎಸ್‌ನ ಸೆಕ್ಷನ್ 109 ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಅವರ ಮೇಲೆ ಬಿಎನ್‌ಎಸ್‌ನ ಇನ್ನೂ ಕೆಲವು ಸೆಕ್ಷನ್‌ಗಳ ಅಡಿಯಲ್ಲಿಯೂ ಪ್ರಕರಣ ದಾಖಲಾಗಿದೆ.