ಹೊಸದಿಗಂತ ವರದಿ ದಾವಣಗೆರೆ:
ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿ ಮಾತಿಗೆ ಮರುಳಾದ ನಗರದ ಸಾಫ್ಟ್‌ವೇರ್ ಇಂಜಿನಿಯರ್ ವೊಬ್ಬ 9.34 ಲಕ್ಷ ರೂ.ಗೂ ಅಧಿಕ ಹಣ ಕಳೆದುಕೊಂಡ ಘಟನೆ ವರದಿಯಾಗಿದೆ.
ವಧುವನ್ನು ಹುಡುಕುತ್ತಿದ್ದ ದಾವಣಗೆರೆ ಟೆಕ್ಕಿಗೆ ಸಂಗಮ ಮ್ಯಾಟ್ರಿಮೋನಿ ಆಪ್ ನಲ್ಲಿ ಕಳೆದ ಏ.24ರಂದು ಯುವತಿಯೊಬ್ಬಳು ಅಪರಿಚಿತ ನಂಬರ್ ನಿಂದ ವಾಟ್ಸಪ್ ಮೆಸೇಜ್ ಮಾಡಿ, ಅಭಿನಯ ಎಂಬ ಪ್ರೊಫೈಲ್ ನಿಂದ ಪರಿಚಯವಾಗಿದ್ದಳು. ಮೂಲತಃ ತಮಿಳುನಾಡಿನ ಚೆನ್ನೈನವಳಾದ ತಾನು ಸದ್ಯ ಮಲೇಷ್ಯಾದಲ್ಲಿ ನೆಲೆಸಿರುವುದಾಗಿ ನಂಬಿಸಿದ್ದಳು.
ನಿಮ್ಮ ಪ್ರೊಫೈಲ್ ಇಷ್ಟವಾಗಿದ್ದು, ನಿಮ್ಮನ್ನು ಮದುವೆಯಾಗುತ್ತೇನೆಂದು ವಂಚಕಿ ಯುವತಿ ಹೇಳಿದ್ದಳು. ನಂತರ ತಾನು ಗ್ಲೋಬಲ್ ಟಿಆರ್‌ಎಕ್ಸ್ ಎಂಬ ಕಂಪನಿಯಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದು, ನೀವೂ ಆಸಕ್ತಿ ಇದ್ದರೆ ಹಣ ಹೂಡಿಕೆ ಮಾಡಿ ಎಂಬುದಾಗಿ ದಾವಣಗೆರೆ ಟೆಕ್ಕಿಗೆ ಪ್ರೇರೇಪಿಸಿ, ಲಿಂಕ್ ಸಹ ಕಳಿಸಿದ್ದಳು.
ವಂಚಕ ಯುವತಿ ಮಾತನ್ನು ನಂಬಿದ ಟೆಕ್ಕಿ ಲಿಂಕ್ ಕ್ಲಿಕ್ ಮಾಡಿ, ಕ್ರಿಪ್ಟೋ ಕರೆನ್ಸಿಗೆ ಹೂಡಿಕೆಗೆಂದು ಮೇ 4ರಿಂದ 9ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 9.34 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಪ್ರೊಸೆಸಿಂಗ್ ಶುಲ್ಕ ಪಾವತಿಸುವಂತೆ ಮತ್ತೆ ಅಪರಿಚಿತ ನಂಬರ್ ನಿಂದ ಟೆಕ್ಕಿಗೆ ಕರೆ ಬಂದಿದೆ.
ಶೇ.5ರಷ್ಟು ಪ್ರೊಸೆಸಿಂಗ್ ಫೀಸ್ ಸಹ ವರ್ಗಾವಣೆ ಮಾಡಿದ್ದ ಟೆಕ್ಕಿಗೆ ಬಳಿಕ ಅಮೇರಿಕನ್ ಡಾಲರ್ ನಿಂದ ಭಾರತದ ರುಪಾಯಿಗೆ ಕನ್ವರ್ಟ್ ಮಾಡಲು ಮತ್ತೆ ಆನಲೈನ್ ವಂಚಕರು ಬೇಡಿಕೆ ಇಟ್ಟಿದ್ದಾರೆ. ಆಗ ಎಚ್ಚೆತ್ತ ಟೆಕ್ಕಿ ತನ್ನ ಸ್ನೇಹಿತರ ಬಳಿ ವಿಚಾರಿಸಿದಾಗ ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿಯಿಂದ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಇದೀಗ ತನ್ನ ಹಣವನ್ನು ವಾಪಾಸ್ ಕೊಡಿಸುವ ಜೊತೆಗೆ ವಂಚಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರ ಮೊರೆ ಹೋಗಿದ್ದು, ದಾವಣಗೆರೆ ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.