ಹೊಸದಿಗಂತ ವರದಿ ಮಡಿಕೇರಿ:
ರಾಯಚೂರು ಮೂಲದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪೊನ್ನಂಪೇಟೆಯ ಹಳ್ಳಿಗಟ್ಟುವಿನಲ್ಲಿರುವ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ)ಯ ಹಾಸ್ಟೆಲ್’ನಲ್ಲಿ ನಡೆದಿದೆ.
ಸಿಐಟಿಯಲ್ಲಿ ಪ್ರಥಮ ವರ್ಷದ ಎ.ಐ.ಎಂ.ಎಲ್ ವ್ಯಾಸಂಗ ಮಾಡುತ್ತಿರುವ ತೇಜಸ್ವಿನಿ (19) ಎಂಬಾಕೆಯೇ ಆತ್ಮಹತ್ಯೆಗೆ ಶರಣಾದವಳಾಗಿದ್ದಾಳೆ.
ಈಕೆ ರಾಯಚೂರಿನ ಮಹಾಂತಪ್ಪ ಎಂಬವರ ಏಕೈಕ ಪುತ್ರಿಯಾಗಿದ್ದು, ಮೂರು ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಈಕೆ, ಅಂದಿನ ಕಾರ್ಯಕ್ರಮಕ್ಕೆ ಬಾರದ ಸ್ನೇಹಿತರಿಗೆ ಬುಧವಾರ ಕೂಡಾ ಸಿಹಿ ಹಂಚಿದ್ದಳೆನ್ನಲಾಗಿದೆ. ಬುಧವಾರವೂ ತರಗತಿಗೆ ಆಗಮಿಸಿದ ಆಕೆ ಸಂಜೆ 4 ಗಂಟೆಗೆ ಹಾಸ್ಟೆಲ್ ಸೇರಿಕೊಂಡಿದ್ದಾಳೆ. 4.30 ಗಂಟೆಗೆ ಆಕೆಯ ಸಹಪಾಠಿ ಕೊಠಡಿಗೆ ಹೋದಾಗ ಬಾಗಿಲು ಒಳಗಿನಿಂದ ಹಾಕಿಕೊಂಡಿದ್ದಳು.
ಎಷ್ಟೇ ಕೂಗಿದರೂ ಆಕೆ ಬಾರದಿದ್ದಾಗ ಹಾಸ್ಟೆಲ್ ಮೇಲ್ವಿಚಾರಕರಿಗೆ ವಿಷಯ ತಿಳಿಸಿ, ಬಾಗಿಲು ತೆಗೆದು ನೋಡಿದಾಗ ತೇಜಸ್ವಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೋಚರಿಸಿದೆ. ನಂತರ ಪರಿಶೀಲಿಸಿದಾಗ ಡೆತ್ ನೋಟ್ ಪತ್ತೆಯಾಗಿದ್ದು, ‘ಆರು ಬ್ಯಾಕ್ ಲಾಗ್ ಇರುವ ಕಾರಣ, ತನಗೆ ಮುಂದೆ ಓದಲು ಇಷ್ಟವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಬರೆದಿರುವುದಾಗಿ ಹೇಳಲಾಗಿದೆ.
ಪೊನ್ನಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.