ಹೊಸದಿಗಂತ ವರದಿ ಬೆಳಗಾವಿ:
ಮದವೇರಿದ ಆನೆಯೊಂದು ಮನೆ ಆವರಣದಲ್ಲಿ ನಿಲ್ಲಿಸಿದ್ದ ಕಾರನ್ನು ಜಖಂಗೊಳಿಸಿದ ಘಟನೆ ಬೆಳಗಾವಿ ತಾಲೂಕಿನ ಉಚಗಾಂವ್ ಗ್ರಾಮದಲ್ಲಿ ಮಧ್ಯರಾತ್ರಿ ನಡೆದಿದೆ.
ಉಚಗಾಂವ-ಬೆಕ್ಕಿನಕೆರೆ ಮಾರ್ಗದಲ್ಲಿರುವ ಡಾ. ನಿರಂಜನ್ ಕದಮ್ ಎಂಬವರ ಮನೆ ಆವರಣಕ್ಕೆ ನುಗ್ಗಿದ ಆನೆ, ಅಲ್ಲಿಯೇ ಪಾರ್ಕ್ ಮಾಡಿದ್ದ ಕಾರನ್ನು ಎತ್ತಿ ಬಿಸಾಕಿ ಜಖಂಗೊಳಿಸಿದೆ. ಗೋವಾದ ಮಡಗಾಂವ ಮೂಲದ ಸಚೀನ್ ಪಾಟೀಲ ಎನ್ನುವವರ ಕಾರು ಇದಾಗಿದೆ. ಅವರು ಸಂಬಂಧಿಕರನ್ನು ಕರೆದುಕೊಂಡು ಹೋಗಲು ಬಂದಿದ್ದರು ಎನ್ನಲಾಗಿದೆ.
ಬೆಳಗಿನ ಜಾವ 1-30ರ ಸುಮಾರಿಗೆ ಈ ಆನೆ ದಾಳಿ ನಡೆಸಿದೆ, ದಾಳಿಗೆ ಕಾರು ಗುರುತು ಸಿಗದಂತಾಗಿದೆ. ಅಲ್ಲದೇ, ಮನೆಯ ಬಳಿಯಿದ್ದ ಎರಡು ಸಿಂಟೆಕ್ಸ್ ನೀರಿನ ಟ್ಯಾಂಕುಗಳನ್ನು ಕೂಡ ಒಡೆದು ಹಾಕಿದೆ. ಈ ಘಟನೆಯಿಂದ ಸುತ್ತ ಮುತ್ತಲಿನ ಪರಿಸರದಲ್ಲಿ ಆತಂಕ ಮನೆ ಮಾಡಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳುನ್ನು ಒತ್ತಾಯಿಸಿದ್ದಾರೆ.