ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗಳಿಸಿದರೂ ಉತ್ತರ ಪ್ರದೇಶದಲ್ಲಿ (uttarpradesh) ಪಕ್ಷಕ್ಕೆ ಭಾರಿ ಆಘಾತವಾಗಿದೆ.
400ಕ್ಕೂ ಅಧಿಕ ಸೀಟು ಗೆಲ್ಲುವ ವಿಶ್ವಾಸದಲ್ಲಿದ್ದ ಪಕ್ಷ 300 ಕೂಡ ದಾಟದೇ ಇರುವುದಕ್ಕೆ ಭಾರಿ ಶಾಕ್ ನೀಡಿದೆ. ಅದರಲ್ಲಿಯೂ ಬಿಜೆಪಿಯ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದಲ್ಲಿನ ಮತದಾರರು ಈ ಬಾರಿ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಆಘಾತ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಯಿಂದ ಉತ್ತರ ಪ್ರದೇಶದ ಜನತೆಯ ಮೇಲೆ ಪಕ್ಷ ಇಟ್ಟುಕೊಂಡಿದ್ದ ವಿಶ್ವಾಸಕ್ಕೆ ಧಕ್ಕೆ ಬಂದಿದೆ. ಅದೇ ಇನ್ನೊಂದೆಡೆ ಕಾಂಗ್ರೆಸ್ಸಿಗರು ಬಹುಮತ ಪಡೆಯದಿದ್ದರೂ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆದಿಲ್ಲ ಎನ್ನುವ ಖುಷಿಯಲ್ಲಿದ್ದಾರೆ.
ಇದರ ನಡುವೆಯೇ, ಬಾಲಿವುಡ್ ನಟ ಅನುಪಮ್ ಖೇರ್ ನಿಗೂಢಾರ್ಥದಲ್ಲಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅಷ್ಟಕ್ಕೂ ಅನುಪಮ್ ಖೇರ್ ಅವರು ಬಿಜೆಪಿಯ ಪರವಾಗಿ ಒಲವು ಇರುವವರು. ಇದಾಗಲೇ ಸಾಕಷ್ಟು ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದವರು. ಈ ಫಲಿತಾಂಶದಿಂದ ಅನುಪಮ್ ಖೇರ್ ಅವರಿಗೂ ಸಹಜವಾಗಿಯೇ ಶಾಕ್ ಆಗಿದೆ. ಇದನ್ನೇ ಇಟ್ಟುಕೊಂಡು ನಟ ಇದೀಗ ಪೋಸ್ಟ್ ಮಾಡಿದ್ದಾರೆ.
‘ಪ್ರಾಮಾಣಿಕ ವ್ಯಕ್ತಿ ಯಾವಾಗಲೂ ಹೆಚ್ಚು ಪ್ರಾಮಾಣಿಕನಾಗಿರಬಾರದು ಎಂದು ನಾನು ಆಗಾಗ ಯೋಚಿಸುತ್ತೇನೆ. ಯಾವಾಗಲೂ ನೇರವಾಗಿರುವ ಮರವನ್ನೇ ಮೊದಲು ಕತ್ತರಿಸುತ್ತಾರೆ. ಪ್ರಾಮಾಣಿಕ ವ್ಯಕ್ತಿ ಯಾವಾಗಲೂ ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಾರೆ. ಎಷ್ಟೇ ಅಡೆತಡೆ ಬಂದರೂ ಅವರು ಪ್ರಾಮಾಣಿಕತೆಯನ್ನು ಬಿಟ್ಟುಕೊಡುವುದಿಲ್ಲ. ಈ ಕಾರಣದಿಂದಲೇ ಅವರು ಕೋಟಿ ಕೋಟಿ ಜನರಿಗೆ ಸ್ಫೂರ್ತಿಯಾಗಿದ್ದಾರೆ’ ಎಂದಿದ್ದಾರೆ ಅನುಪಮ್ ಖೇರ್.
ಇದು ನೇರವಾಗಿ ಉತ್ತರ ಪ್ರದೇಶದ ಫಲಿತಾಂಶದೆಡೆ ಬೆರಳು ಮಾಡಿ ತೋರಿಸುತ್ತಿದೆ ಎಂದು ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ.
ಇನ್ನು ಹಲವರು ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ಅಗಾಧ ಪ್ರಗತಿಯನ್ನು ನೋಡಿಯೂ, ಜನರು ಮತ ಚಲಾಯಿಸದೇ ಇರುವುದು ನೋವಿನ ಸಂಗತಿ ಎಂದಿದ್ದು, ಅನುಮಪ್ ಖೇರ್ ಅವರು ಬರೆದಿರುವುದು ಸರಿಯಾಗಿದೆ ಎನ್ನುತ್ತಿದ್ದಾರೆ
ವಿಷಯಗಳನ್ನು ಸ್ಪಷ್ಟವಾಗಿ, ನಿಖರವಾಗಿ ಮತ್ತು ಇರುವುದಕ್ಕೆ ಬಣ್ಣ ಬಳಿದು ಲೇಖನವನ್ನು ಸುಮ್ಮನೆ ಎಳೆಯದೇ ಕ್ಲುಪ್ತವಾಗಿ ಹೇಳಿದ್ದೀರಿ. ಬಹಳ ಚೆನ್ನಾಗಿದೆ….
ಹಾಗೂ ಅನುಪಮ್ ಖೇರ್ ಅವರ ಮಾತು ನೂರಕ್ಕೆ ನೂರು ಸತ್ಯ… ಕಲಿಗಾಲದಲ್ಲಿ ಪ್ರಾಮಾಣಿಕರಿಗೆ ಬೆಲೆ ಹಾಗೂ ನೆಲೆ ಎರಡೂ ಇಲ್ಲ .