ಟುನೀಶಿಯಾದ ಆಫ್ರಿಕನ್ ಆನೆಗಳಿಗೆ ಮಿಡಿದ ಅನಂತ್ ಅಂಬಾನಿ ಹೃದಯ: ವಂತಾರಾಕ್ಕೆ ಬರಲಿದೆ ಹೊಸ ಅತಿಥಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರಿಯಾದ ಪಾಲನೆ ಇಲ್ಲದೆ, ಸಂಕಷ್ಟದಲ್ಲಿದ್ದ ಮೂರು ಆಫ್ರಿಕನ್ ಆನೆಗಳ ವೇದನೆಗೆ ರಿಲಯನ್ಸ್​ ಇಂಡಸ್ಟ್ರೀಸ್​ ನಿರ್ದೇಶಕ ಅನಂತ್​ ಅಂಬಾನಿಯ ಹೃದಯ ಮಿಡಿದಿದ್ದು, ತನ್ನ ಕನಸಿನ ಕೂಸಾದ ‘ವಂತಾರಾ’ ಕ್ಕೆ ಟುನೀಶಿಯಾದ ಖಾಸಗಿ ಮೃಗಾಲಯದಿಂದ ಆನೆಗಳು ಬರಲಿವೆ.

ಗುಜರಾತಿನ ಜಾಮ್​ನಗರದಲ್ಲಿರುವ ವಿಶ್ವದ ಅತಿ ದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರವಾದ ‘ವಂತಾರಾ’ ಕ್ಕೆ ಟುನೀಶಿಯಾದ ಮೂರು ಆಫ್ರಿಕನ್ ಆನೆಗಳು ಆಗಮಿಸಲಿವೆ. ಚಾರ್ಟೆಡ್​ ಕಾರ್ಗೋ ವಿಮಾನದ ಮೂಲಕ ಆನೆಗಳನ್ನು ಕರೆತರಲು ವಂತಾರಾ ಯೋಜಿಸಿದೆ.

ಮೂರು ಆನೆಗಳ ಪೈಕಿ ಎರಡು ಹೆಣ್ಣು, ಒಂದು ಗಂಡು. 28-29 ವರ್ಷ ವಯಸ್ಸಿನ ಮೂರು ಆನೆಗಳು ಇದೀಗ ವಂತಾರಾದಲ್ಲಿ ಹೊಸ ಸೂರು ಕಂಡುಕೊಳ್ಳಲಿವೆ.

ಟುನೀಶಿಯಾದ ಮೃಗಾಲಯದಲ್ಲಿ ಸರಿಯಾದ ವಸತಿ, ಮೂಲ ಸೌಕರ್ಯಗಳನ್ನು ನೀಡಲು ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಮೃಗಾಲಯದ ಆಡಳಿತ ಮಂಡಳಿ ಮಾಡಿಕೊಂಡ ಮನವಿಗೆ ಅನಂತ್ ಅಂಬಾನಿ ಅವರು ಪಾಸಿಟಿವ್ ಆಗಿ ಸ್ಪಂದಿಸಿದ್ದು, ಆನೆಗಳಿಗೆ ಹೊಸ ನೆಲೆಯನ್ನು ಕಂಡುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ.

ನಾಲ್ಕು ವರ್ಷ ವಯಸ್ಸಿನಲ್ಲಿದ್ದ ಅಚ್ಟೌಮ್, ಕಾನಿ ಮತ್ತು ಮಿನಾ ಎಂಬ ಮೂರು ಆನೆಗಳನ್ನು ಕಳೆದ ಎರಡು ದಶಕಗಳ ಹಿಂದೆ ಬುರ್ಕಿನಾ ಫಾಸೊದಿಂದ ಟುನೀಶಿಯಾದ ಫ್ರಿಗುಯಾ ಪಾರ್ಕ್‌ಗೆ ವರ್ಗಾಯಿಸಲಾಯಿತು. ಕಳೆದ 23 ವರ್ಷಗಳಿಂದ ಮೃಗಾಲಯಕ್ಕೆ ಬರುತ್ತಿದ್ದ ಜನರ ಕಣ್ಣೆದುರು ಕಾಣಿಸಿಕೊಳ್ಳುತ್ತಿದ್ದ ಈ ಆನೆಗಳಿಗೆ ಇದೀಗ ಹೊಸ ಸೂರು ಸಿಕ್ಕಿದ್ದು, ಅದು ಅನಂತ್ ಅಂಬಾನಿ ಅವರ ವಂತಾರಾ ಎಂಬುದು ಖುಷಿ ಸಂಗತಿಯಾಗಿದೆ.

ಆರೋಗ್ಯ, ಆಹಾರ, ವಸತಿ ಸಮಸ್ಯೆಗಳಿಂದ ಬಳಲುತ್ತಿದ್ದ ಮೂರು ಆಫ್ರಿಕನ್ ಆನೆಗಳ ಆರ್ಥಿಕ ವೆಚ್ಚಗಳನ್ನು ಭರಿಸಲು ತೀವ್ರ ಪರದಾಡಿದ ಮೃಗಾಲಯ ಆಡಳಿತ ಮಂಡಳಿ, ಫ್ರಿಗುಯಾ ಪಾರ್ಕ್‌ನಲ್ಲಿ ಕೇಂದ್ರ ಆಕರ್ಷಣೆಯಾಗಿದ್ದ ಗಜಗಳನ್ನು ನಿವೃತ್ತಿಗೊಳಿಸುವ ನಿರ್ಧಾರಕ್ಕೆ ಮುಂದಾಯಿತು. ಆನೆಗಳನ್ನು ಯಾವ ಸೂಕ್ತವಾದ ಸ್ಥಳಕ್ಕೆ ಕಳಿಸಬೇಕು ಎಂಬ ಯೋಚನೆಯಲ್ಲಿ ತೊಡಗಿದ್ದ ಟುನೀಶಿಯಾ ಮೃಗಾಲಯ ಆಡಳಿತ ಮಂಡಳಿ, ಅಂತಿಮವಾಗಿ ಅನಂತ್ ಅಂಬಾನಿ ಅವರ ವಂತಾರವೇ ಸೂಕ್ತ ಹಾಗೂ ಉತ್ತಮ ಜಾಗ ಎಂದು ನಿರ್ಧರಿಸಿ, ಇದೀಗ ಇಲ್ಲಿಂದ ಭಾರತಕ್ಕೆ ಕಳಿಸುವ ಒಪ್ಪಂದ ಮಾಡಿಕೊಂಡಿದೆ.

ವಂತಾರಾ
ರಿಲಯನ್ಸ್​ ಇಂಡಸ್ಟ್ರೀಸ್​ ನಿರ್ದೇಶಕ ಅನಂತ್​ ಅಂಬಾನಿ ಅವರು ವಿಶ್ವದ ಅತಿ ದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರವನ್ನು ತೆರೆಯುವ ತಮ್ಮ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್​ ಅನ್ನು 2024ರ ಫೆ.26ರಂದು ಘೋಷಣೆ ಮಾಡಿದರು. ಈ ಪ್ರಾಜೆಕ್ಟ್​ ಹೆಸರು ವಂತಾರಾ. ಇದರ ಅರ್ಥ ಕಾಡಿನ ನಕ್ಷತ್ರ. ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಪೋಷಣೆ ಮತ್ತು ಗಾಯಗೊಂಡ ಪ್ರಾಣಿಗಳ ಪುನರ್ವಸತಿ, ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಈ ಯೋಜನೆಯ ಪ್ರಮುಖ ಗುರಿಯಾಗಿದ್ದು, ದೇಶ ಮತ್ತು ವಿದೇಶ ಎರಡರಲ್ಲೂ ಕಾರ್ಯನಿರ್ವಹಿಸಲಿದೆ. ಗುಜರಾತಿನ ರಿಲಯನ್ಸ್​ನ ಜಾಮ್‌ನಗರ ರಿಫೈನರಿ ಕಾಂಪ್ಲೆಕ್ಸ್‌ನ ಗ್ರೀನ್ ಬೆಲ್ಟ್‌ನಲ್ಲಿ 3000 ಎಕರೆಗಳಷ್ಟು ವಿಶಾಲ ಪ್ರದೇಶವಿದ್ದು, ವಂತಾರಾ ಕಾರ್ಯಕ್ರಮದ ಅಡಿಯಲ್ಲಿ ಈ ಜಾಗವನ್ನು ಕಾಡಿನಂತಹ ಪರಿಸರಕ್ಕೆ ಪರಿವರ್ತಿಸಲಾಗಿದೆ. ಸಂರಕ್ಷಿಸಲ್ಪಟ್ಟ ಪ್ರಾಣಿಗಳ ಪಾಲನೆಗಾಗಿ ನೈಸರ್ಗಿಕ, ಸಮೃದ್ಧ ಮತ್ತು ಹಸಿರು ಆವಾಸಸ್ಥಾನವನ್ನು ಹೊಂದಿದೆ. ಜಾಗತಿಕವಾಗಿ ಪ್ರಾಣಿ ಸಂರಕ್ಷಣಾ ಪ್ರಯತ್ನಗಳಿಗೆ ಪ್ರಮುಖ ಕೊಡುಗೆ ನೀಡುವವರಲ್ಲಿ ಮೂಂಚೂಣಿ ಸ್ಥಾನದಲ್ಲಿ ನಿಲ್ಲುವ ಗುರಿಯನ್ನು ವಂತಾರಾ ಗುರಿ ಹೊಂದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ವಂತಾರಾ ಪ್ರಾಜೆಕ್ಟ್​ ಗುಜರಾತಿನ ಜಾಮ್‌ನಗರದಲ್ಲಿ ರಿಲಯನ್ಸ್‌ನ ನವೀಕರಿಸಬಹುದಾದ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿರುವ ರಿಲಯನ್ಸ್​ ಇಂಡಸ್ಟ್ರಿ ಲಿಮಿಟೆಡ್​ ಮತ್ತು ರಿಲಯನ್ಸ್ ಫೌಂಡೇಶನ್ ಮಂಡಳಿಗಳ ನಿರ್ದೇಶಕರಾದ ಅನಂತ್​ ಅಂಬಾನಿ ಅವರ ಪರಿಕಲ್ಪನೆಯಾಗಿದೆ ಮತ್ತು ಕನಸಿನ ಯೋಜನೆಯೂ ಆಗಿದೆ.

ವಂತಾರಾ ಅತ್ಯಾಧುನಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳು, ಸಂಶೋಧನೆ ಮತ್ತು ಶೈಕ್ಷಣಿಕ ಕೇಂದ್ರಗಳನ್ನು ಒಳಗೊಂಡಂತೆ ಅತ್ಯುತ್ತಮ ಗುಣಮಟ್ಟದ ಪ್ರಾಣಿ ಸಂರಕ್ಷಣೆ ಮತ್ತು ಆರೈಕೆ ಘಟಕಗಳನ್ನು ರಚಿಸುವತ್ತ ಗಮನಹರಿಸಿದೆ. ವಂತಾರಾವು ತನ್ನ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸುಧಾರಿತ ಸಂಶೋಧನೆ ಮತ್ತು ಪ್ರತಿಷ್ಠಿತ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳು ಮತ್ತು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಮತ್ತು ವರ್ಲ್ಡ್ ವೈಲ್ಡ್‌ಲೈಫ್ ಫಂಡ್ ಫಾರ್ ನೇಚರ್ (WWF) ನಂತಹ ಸಂಸ್ಥೆಗಳೊಂದಿಗೆ ಸಹಯೋಗವನ್ನು ಸಂಯೋಜಿಸುವತ್ತ ಗಮನಹರಿಸುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!