ಹೊಸದಿಗಂತ ವರದಿ ಮಡಿಕೇರಿ:
ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮದಲ್ಲಿ ನಾಲ್ವರನ್ನು ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೇಗೂರು ಗ್ರಾಮದ ಬಾಳಂಗಾಡು ಎಂಬಲ್ಲಿಯ ಒಂಟಿ ಮನೆಯಲ್ಲಿ ವಾಸವಿದ್ದ ಗಿರೀಶ(38) ಎಂಬಾತ ಗುರುವಾರ ರಾತ್ರಿ ತನ್ನ ಪತ್ನಿ ನಾಗಿ(30) ಮಲಮಗಳು ಕಾವೇರಿ(7) ನಾಗಿಯ ಅಜ್ಜ ಕರಿಯ, ಅಜ್ಜಿ ಗೌರಿ( ಇಬ್ಬರೂ 70 ವರ್ಷ ಮೇಲ್ಟಟ್ಟವರು) ಎಂಬವರುಗಳನ್ನು ಕತ್ತಿಯಿಂದ ಕಡಿದು ಹತ್ಯೆಗೈದು ಪರಾರಿಯಾಗಿದ್ದನೆನ್ನಲಾಗಿದೆ.
ಶುಕ್ರವಾರ ಮಧ್ಯಾಹ್ನದ ವೇಳೆಗೆ ಈ ಕೃತ್ಯ ಬೆಳಕಿಗೆ ಬಂದಿದ್ದು, ಘಟನಾ ಸ್ಥಳಕ್ಕೆ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ. ಎಂ.ಬಿ.ಬೋರಲಿಂಗಯ್ಯ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಅಪರ ಪೊಲೀಸ್ ಅಧೀಕ್ಷಕ ಕೆ.ಎಸ್. ಸುಂದರರಾಜ್,ವೀರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಎಸ್.ಮಹೇಶ್ ಕುಮಾರ್, ಗೋಣಿಕೊಪ್ಪ ವೃತ್ತ ಸಿಪಿಐ ಶಿವರಾಜ್ ಮುಧೋಳ, ಪೊನ್ನಂಪೇಟೆ ಠಾಣಾಧಿಕಾರಿ ಜಿ.ನವೀನ್ ಮತ್ತು ಅಪರಾಧ ಪತ್ತೆ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ದೂರುದಾರರು ನೀಡಿದ ಮಾಹಿತಿ ಅನ್ವಯ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ವೀರಾಜಪೇಟೆ ಉಪವಿಭಾಗ ಡಿವೈಎಸ್ಪಿ ನೇತೃತ್ವದಲ್ಲಿ ಉಪವಿಭಾಗ ಮಟ್ಟದ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡ ಪೊಲೀಸರು, ಆರೋಪಿಯನ್ನು ಕೇರಳ ರಾಜ್ಯದ ತಲಮುಳ ಎಂಬಲ್ಲಿ ಅಲ್ಲಿನ ಪೊಲೀಸರ ಸಹಕಾರದೊಂದಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಗಿರೀಶ ನಾಗಿಯ ಮೂರನೇ ಗಂಡನಾಗಿದ್ದು, ಒಂದು ವರ್ಷದಿಂದ ಒಟ್ಟಿಗೆ ವಾಸವಿದ್ದರೆನ್ನಲಾಗಿದೆ. ನಾಗಿಯ ಎರಡನೇ ಗಂಡನಾದ ಸುಬ್ರಮಣಿಯೊಂದಿಗೆ ಆಕೆಗೆ ಮತ್ತೆ ಸಂಬಂಧವಿರುವ ಬಗ್ಗೆ ಸಂಶಯದಿಂದ ಆರೋಪಿ ಗಿರೀಶನು ನಾಲ್ಕು ಜನರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುವುದಾಗಿ ಎಸ್ಪಿ ರಾಮರಾಜನ್ ಅವರು ತಿಳಿಸಿದ್ದಾರೆ. ಪ್ರಕರಣದ ಆರೋಪಿಯನ್ನು ಪ್ರಕರಣ ದಾಖಲಾದ 6 ಗಂಟೆಯಲ್ಲಿ ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.