Saturday, January 3, 2026

ಕುಡಿದ ಮತ್ತಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ, ಪೊಲೀಸರ ಮೇಲೆಯೂ ಹಲ್ಲೆ ನಡೆಸಿದವ ಅಂದರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕುಡಿದ ಮತ್ತಿನಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿ ಜತೆ ಯುವಕನೊಬ್ಬ ಅಸಭ್ಯ ವರ್ತನೆ ತೋರಿದ್ದಾನೆ. ಇದನ್ನು ಪ್ರಶ್ನಿಸಲು ಬಂದು ಪೊಲೀಸರ ಮೇಲೆಯೂ ಹಲ್ಲೆ ನಡೆಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಜನವರಿ 1ರ ಮುಂಜಾನೆ ಸುಮಾರು 1.40ರ ಸುಮಾರಿಗೆ ಈ ಘಟನೆ ನಡೆದಿದ್ದು, ರಕ್ಷಣೆಗೆಂದು ಬಂದ ಪೊಲೀಸರೊಂದಿಗೆ ಯುವಕರು ಗಲಾಟೆ ಮಾಡಿಕೊಂಡಿದ್ದಾರೆ. ನ್ಯೂ ಇಯರ್ ಆಚರಣೆಯಲ್ಲಿ ಕಂಠ ಪೂರ್ತಿ ಕುಡಿದ ಯುವಕರು, ರಸ್ತೆ ಪಕ್ಕ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯರ ಬಳಿ ಅವಹೇಳನಕಾರಿ ವರ್ತನೆ ತೋರಿದ್ದು, ಇದರಿಂದ ಆತಂಕಗೊಂಡ ಯುವತಿಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಹೊಸವರ್ಷದ ಸಂಭ್ರಮಾಚರಣೆಯ ವೇಳೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ರವಿ ಸ್ಥಳಕ್ಕೆ ಧಾವಿಸಿ ಯುವಕರನ್ನು ಪ್ರಶ್ನಿಸಿದ್ದರು. ಈ ವೇಳೆ ಯುವಕರು ಪೊಲೀಸರೊಂದಿಗೆ ಕಿರಿಕ್ ನಡೆಸಿ, ಅವರನ್ನು ತಳ್ಳಾಡಿ, ರಿಫ್ಲೆಕ್ಟರ್ ಜಾಕೆಟ್ ಹರಿದು ಪುಂಡಾಟ ನಡೆಸಿದ್ದಾರೆ. ಅಲ್ಲದೆ ಪೊಲೀಸರ ಮೇಲೆ ಹಲ್ಲೆಗೂ ಮುಂದಾದಿದ್ದಾರೆ ಎಂದು ತಿಳಿದುಬಂದಿದೆ.

ಪರಿಸ್ಥಿತಿಯನ್ನು ನಿಯಂತ್ರಿಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಹೊಯ್ಸಳ ವಾಹನದಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ. ಬಂಧಿತರನ್ನು ಅನ್ಶ್ ಮೆಹ್ತಾ ಮತ್ತು ಪರ್ವ್ ರಾಠಿ ಎಂದು ಗುರುತಿಸಲಾಗಿದೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಮತ್ತು ಕರ್ತವ್ಯದಲ್ಲಿರುವ ಪೊಲೀಸರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

error: Content is protected !!