Monday, December 8, 2025

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಗೆ ‘ಅಭಿನವ ಕೃಷ್ಣದೇವರಾಯ’ ಬಿರುದು ನೀಡಿ ಗೌರವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಕೃಷ್ಣ ನೀಡಿದ ಭಗವದ್ಗೀತೆ ಕೇವಲ ಧರ್ಮಗ್ರಂಥವವಲ್ಲ, ಅದು ಸಂಕಷ್ಟದ ಸಮಯದಲ್ಲಿ ಮಾನಸೀಕವಾಗಿ ಕುಂದಿದ್ದಾಗ ಮಾರ್ಗದರ್ಶನ ನೀಡಬಲ್ಲ ಮಹಾಗ್ರಂಥ ಎಂದು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಕೃಷ್ಣಮಠ ರಾಜಾಂಗಣದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ಬೃಹತ್ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

ಸನಾತನ ಧರ್ಮವು ವೇದ, ಜ್ಞಾನ ಮತ್ತು ಗೀತೆಯ ಸತ್ವವನ್ನು ಒಳಗೊಂಡು ಆಳವಾದ ಬೇರುಗಳಿಂದ ಕೂಡಿದೆ. ನಾನು ಕರ್ಮಯೋಗವನ್ನು ನಂಬುತ್ತೇನೆ. ಯಾವುದೇ ಕೆಲಸವನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತೇನೆ ಎಂದರು.

ಇಂದಿನ ಜೆನ್ ಝೀಗಳು ಭಗವದ್ಗೀತೆಯನ್ನು ಕೇವಲ ಪೂಜೆ ಮಾಡುವ ಗ್ರಂಥ ಎಂದು ತಿಳಿದುಕೊಳ್ಳಬಾರದು, ಅದನ್ನು ಓದಬೇಕು. ಬದುಕಿನ ಸಂಕಷ್ಟದ ಸಮಯದಲ್ಲಿ ಅದು ಮಾರ್ಗದರ್ಶನ ನೀಡುತ್ತದೆ. ಇಂದಿನ ಸಂಘರ್ಷಮಯ ಸಂದರ್ಭದಲ್ಲಿ ಭಗವದ್ಗೀತೆ ಹೆಚ್ಚು ಪ್ರಸ್ತುತ ಎಂದರು.

ಪಾಶ್ಚಿಮಾತ್ಯ ಶಕ್ತಿಗಳು ನಮ್ಮ ಸನಾತನ ಧರ್ಮವನ್ನು ನಾಶಮಾಡಲು ಯತ್ನಿಸಿದ್ದವು. ಆದರೆ, ಅದು ಸಾಧ್ಯವಾಗಲಿಲ್ಲ. ನಾವು ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ಮಹತ್ವದ ಸ್ಥಾನವಿದೆ. ಗೋವುಗಳ ಸಂರಕ್ಷಣೆ ಕೇವಲ ಭಾವನಾತ್ಮಕ ವಿಷಯವಲ್ಲ. ಅದು ಧರ್ಮ, ತತ್ವಗಳು ಬೋಧಿಸಿರುವ ತಿರುಳು. ಎಲ್ಲಾ ಸಮುದಾಯದವರು ಗೋವುಗಳ ರಕ್ಷಣೆಗೆ ಮುಂದಾಗಬೇಕು. ಪ್ರತಿಯೊಂದು ಕುಟುಂಬವೂ ಕನಿಷ್ಟ ಒಂದು ದನವನ್ನಾದರೂ ಸಾಕಬೇಕು ಎಂದು ಸಲಹೆ ನೀಡಿದರು.
ಉಡುಪಿ ಕೇವಲ ದೇಗುಲಗಳ ನಗರಿಯಲ್ಲ, ಬದಲಾಗಿ ಭಾರತದ ಅಧ್ಯಾತ್ಮದ ಶಕ್ತಿ ಕೇಂದ್ರ ಎಂದು ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಸಂಸ್ಕೃತ ಎಲ್ಲ ಭಾಷೆಗಳಿಗೂ ತಾಯಿಯ ಸ್ಥಾನದಲ್ಲಿದೆ. ಭಗವದ್ಗೀತೆಯೂ ಸಂಸ್ಕೃತದಲ್ಲಿದೆ. ಭಗವದ್ಗೀತೆ ಎಲ್ಲ ಗ್ರಂಥಗಳಿಗೂ ಮೂಲವಾಗಿದ್ದು, ಅದನ್ನು ಎಲ್ಲರೂ ಓದಬೇಕು ಎಂದರು.

ಅಭಿನವ ಕೃಷ್ಣದೇವರಾಯ
ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ‘ಅಭಿನವ ಕೃಷ್ಣದೇವರಾಯ’ ಬಿರುದು ನೀಡಿ ಗೌರವಿಸಿದರು. ರಾಜಕಾರಣಿಯಾಗಿ ಚಲನಚಿತ್ರ ರಂಗ ಮತ್ತು ಆಧ್ಯಾತ್ಮಿಕವಾಗಿ ಸಾಧನೆ ಮಾಡುತ್ತಿರುವ ಅವರಿಗೆ ಇನ್ನಷ್ಟು ಶಕ್ತಿಯನ್ನು ಪರಮಾತ್ಮ ನೀಡಲಿ ಎಂದು ಹರಸಿದರು.

ಆಂದ್ರ ಡಿಸಿಎಂ ಪವನ್ ಕಲ್ಯಾಣ್ ಅವರಿಗೆ ಕೃಷ್ಣ ಸನ್ನಿಧಿಯಲ್ಲಿ ಗೀತಾ ಲೇಖನಯಜ್ಞ ದೀಕ್ಷೆ ನೀಡಿ ಪುತ್ತಿಗೆ ಶ್ರೀಗಳು ರಕ್ಷಾಕಂಕಣ ತೊಡಿಸಿದರು.

ಸಾನ್ನಿಧ್ಯ ವಹಿಸಿದ್ದ ಪರ್ಯಾಯ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಹಾಗೂ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಮತ್ತು ಇಸ್ಕಾನ್ನ ಶ್ರೀ ಸುಭಗ ಸ್ವಾಮೀಜಿ ಆಶೀರ್ವಚನ ನೀಡಿದರು.

error: Content is protected !!