ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕದ ಲಕ್ಷಾಂತರ ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತೆಯರು, ಮಧ್ಯಾಹ್ನದ ಬಿಸಿಯೂಟ ಕಾರ್ಯಕರ್ತೆಯರು ಸೇರಿದಂತೆ ಆಶಾ ಕಾರ್ಯಕರ್ತೆಯರು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಕೇಂದ್ರ ಸರ್ಕಾರವು ಭವಿಷ್ಯ ನಿಧಿ ಮತ್ತು ಇಎಸ್‌ಐನಂತಹ ಎಲ್ಲಾ ಪ್ರಯೋಜನಗಳನ್ನು ತಮಗೆ ನೀಡಬೇಕು ಎನ್ನುವ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.
ಕೇಂದ್ರ ಸರ್ಕಾರದ ಮುಂದೆ ತಮ್ಮ ಬೇಡಿಕೆಗಳನ್ನು ಮಂಡಿಸಿ ಮಾಡುತ್ತಿರುವ ಸ್ಟ್ರೈಕ್ನಿಂದಾಗಿ ಅಂಗನವಾಡಿ ಕೇಂದ್ರಗಳು ಮತ್ತು ಮಧ್ಯಾಹ್ನದ ಬಿಸಿಯೂಟ ಸೇವೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಕಾರ್ಮಿಕರು ಮತ್ತು ಸಹಾಯಕರ ಪ್ರತಿಭಟನೆಯ ಹಿನ್ನೆಲೆ ಮಲ್ಲೇಶ್ವರಂ ಪೊಲೀಸ್ ಠಾಣೆ ಮತ್ತು ಬೆನ್ಸನ್ ಟೌನ್ ಬಳಿಯ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲಾಗಿತ್ತು. ಅದೇ ರೀತಿ, ಮಂಡ್ಯ, ಹುಬ್ಬಳ್ಳಿ, ತುಮಕೂರು ಮತ್ತು ಇತರ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಮುಷ್ಕರದ ಕುರಿತು ಮಾತನಾಡಿರುವ ಕರ್ನಾಟಕ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್‌ನ ಅಧ್ಯಕ್ಷೆ ಎಸ್ ವರಲಕ್ಷ್ಮಿ, ಈ ಮುಷ್ಕರ ನಡೆಸುವುದು ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು. ಅಂಗನವಾಡಿಗಳು, ಮಧ್ಯಾಹ್ನದ ಊಟ ಮತ್ತು ಆರೋಗ್ಯ ಸೇವೆಗಳ ಮೇಲೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪರಿಣಾಮ ಬೀರಿದೆ. ಆದರೆ ಈ ಕಾರ್ಮಿಕರು ಸಹ ಮುಷ್ಕರ ನಡೆಸುವ ದಿನಗಳ ಸಂಖ್ಯೆಗೆ ವೇತನ ನೀಡದ ಕಾರಣ ಬೆಲೆ ತೆರುತ್ತಿದ್ದಾರೆ ಎಂದು ಹೇಳಿದರು.

