ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಅಲಗೇರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗೆ ನಿಗದಿ ಪಡಿಸಿದ ಹೆಚ್ಚುವರಿ ಭೂ ಸ್ವಾಧೀನ ಪ್ರಕ್ರಿಯೆ ಸರ್ವೇ ಕಾರ್ಯಕ್ಕೆ ಆಗಮಿಸಿದ ಅಧಿಕಾರಿಗಳ ತಂಡಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಸ್ಥಳೀಯರ ಆಕ್ರೋಶ ಹೆಚ್ಟಾಗುತ್ತಿದಂತೆ ಅಧಿಕಾರಿಗಳ ತಂಡ ಮರಳಿ ಹೋದ ಘಟನೆ ನಡೆದಿದೆ.
ಅಲಗೇರಿ ವಿಮಾನ ನಿಲ್ದಾಣ ಯೋಜನೆಗೆ ಈಗಾಗಲೇ ಸುಮಾರು 87 ಎಕರೆ 18 ಗುಂಟೆಗಳಷ್ಟು ಜಮೀನು ಗುರುತಿಸಿ ಸರ್ವೆ ನಡೆಸಲಾಗಿದ್ದು ಹೆಚ್ಚುವರಿ 6 ಎಕರೆ 8 ಗುಂಟೆಗಳಷ್ಟು ಜಮೀನಿನ ಭೂ ಸ್ವಾಧೀನಕ್ಕೆ ಸರ್ವೆ ಕಾರ್ಯಕ್ಕೆ
ಕುಮಟಾ ಸಹಾಯಕ ಆಯುಕ್ತರ ಕಚೇರಿಯಿಂದ ಭೂ ಸ್ವಾಧೀನ ಅಧಿಕಾರಿಗಳು,ತಾಲೂಕಿನ ಸರ್ವೇ ಅಧಿಕಾರಿಗಳು,ಕಂದಾಯ ಅಧಿಕಾರಿಗಳು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸರ್ವೆ ಕಾರ್ಯ ನಡೆಸದಂತೆ ಅಧಿಕಾರಿಗಳನ್ನು ತಡೆ ಹಿಡಿದ ಸ್ಥಳೀಯರು ಭೂಮಿ ಕಳೆದುಕೊಂಡವರಿಗೆ ಪರಿಹಾರದ ಕುರಿತು ಸ್ಪಷ್ಟ ಚಿತ್ರಣ ನೀಡಿ ಕೆಲಸ ನಡೆಸುವಂತೆ ತಿಳಿಸಿದರು.
ಈ ಹಿಂದೆ ಸ್ವಾಧೀನ ಪಡೆದ ಜಮೀನಿನ ಮಾಲಿಕರಿಗೆ ಸೂಕ್ತ ಪರಿಹಾರ ಬಂದಿಲ್ಲ ಯಾವ ರೀತಿಯ ಪರಿಹಾರ ನೀಡಲಾಗುವುದು ಎಂದು ಸ್ಥಳೀಯರಿಗೆ ಸ್ಪಷ್ಟ ಪಡಿಸಬೇಕಿದೆ.
ಈ ಹಿಂದೆ ಸಭೆ ನಡೆಸಿ ಇಟ್ಟ ಬೇಡಿಕೆಗಳ ಈಡೇರಿಕೆಗೆ ಯಾವ ರೀತಿಯ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಬೇಕಿದೆ.
ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಜಮೀನಿಗೆ ಕಾಲಿಡಲು ಬಿಡುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಮೇಲಧಿಕಾರಿಗಳು ಆಗಮಿಸಿ ಪರಿಹಾರ ಮತ್ತಿತರ ಬೇಡಿಕೆಗಳ ಕುರಿತು ಸ್ಪಷ್ಟ ಚಿತ್ರಣ ನೀಡಲಿ ಎಂದು ಪ್ರತಿಭಟಿಸಿದರು.
ಬೆಳಿಗ್ಗೆ ಆಗಮಿಸಿದ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ಮದ್ಯಾಹ್ನದ ವರೆಗೆ ತೀವ್ರ ವಾದ ನಡೆದು ಮರಳಿ ಹೋದ ಅಧಿಕಾರಿಗಳು ಸಂಜೆ ಮತ್ತೆ ಮರಳಿ ಬಂದಾಗ ಸುರೇಶ ನಾಯಕ ಅಲಗೇರಿ ನೇತೃತ್ವದಲ್ಲಿ ನಿರಾಶ್ರಿತರಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಅಧಿಕಾರಿಗಳು ಸರ್ವೆ ಕಾರ್ಯ ನಡೆಸದೇ ಮರಳಿದರು.
ಪೊಲೀಸ್ ನಿರೀಕ್ಷಕ ಜಾಕ್ಸನ್ ಡಿಸೋಜ, ಪಿ.ಎಸ್. ಐ ಕುಮಾರ ಕಾಂಬಳೆ, ಮಹಾಂತೇಶ ವಾಲ್ಮೀಕಿ, ಗೀತಾ ಶಿರ್ಶಿಕರ ಮತ್ತು ಸಿಬ್ಬಂದಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡರು.
ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಸಹ ಸ್ಥಳದಲ್ಲಿ ನಿಯೋಜಿಸಲಾಗಿತ್ತು.