ಹೊಸದಿಗಂತ ಡಿಜಿಟಲ್ ಡೆಸ್ಕ್:
ಬನ್ನೇರುಘಟ್ಟ ಜೈವಿಕ ಉದ್ಯಾನವನ ಆಡಳಿತ ಮಂಡಳಿಯು ಮಂಗಳವಾರ ಮೃಗಾಲಯದ ಟಿಕೆಟ್ ದರಗಳನ್ನು ಪರಿಷ್ಕರಿಸಿದ್ದು, ಹೊಸ ದರ ಆಗಸ್ಟ್ 1, 2025 ರಿಂದ ಜಾರಿಗೆ ಬರಲಿದೆ.
ಆಡಳಿತ ಮಂಡಳಿಯು ಟಿಕೆಟ್ ದರವನ್ನು ವಯಸ್ಕರಿಗೆ 20 ರೂ. ಮತ್ತು ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ 10 ರೂ. ಹೆಚ್ಚಿಸಿದೆ. ಆದರೆ, ಸಫಾರಿ ಮತ್ತು ಚಿಟ್ಟೆ ಉದ್ಯಾನವನ ಪ್ರವೇಶದ ಟಿಕೆಟ್ ದರಗಳನ್ನು ಹೆಚ್ಚಳ ಮಾಡಿಲ್ಲ.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿಯೊಂದಿಗಿನ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಎವಿ ಸೂರ್ಯ ಸೇನ್ ಅವರು ತಿಳಿಸಿದ್ದಾರೆ.
ಪ್ರಾಣಿ ಆಹಾರ, ನಿರ್ವಹಣೆ, ಮತ್ತು ಸಿಬ್ಬಂದಿಯ ವೇತನದಲ್ಲಿ ಹೆಚ್ಚಳವಾದ ಕಾರಣದಿಂದಾಗಿ ದರ ಏರಿಕೆ ಅಗತ್ಯವಾಯಿತು. ಬನ್ನೇರುಘಟ್ಟ ಜೈವಿಕ ಉದ್ಯಾನವನವು ಸ್ವಾಯತ್ತ ಸಂಸ್ಥೆಯಾಗಿದ್ದು, ಪ್ರವಾಸಿಗರಿಂದ ಬರುವ ಟಿಕೆಟ್ ಹಣವೇ ಇದರ ಪ್ರಮುಖ ಆದಾಯ ಮೂಲವಾಗಿದೆ.
ಇದರಂತೆ, ಮೃಗಾಲಯ ಪ್ರಾಧಿಕಾರ ಶೇಕಡಾ 50ರಷ್ಟು ದರ ಏರಿಕೆಗೆ ಸರ್ಕಾರಕ್ಕೆ ಮನವಿ ಮಾಡಿದ್ದರೂ, ಸರ್ಕಾರ ಶೇಕಡಾ 20ರಷ್ಟು ಮಾತ್ರ ಒಪ್ಪಿಗೆ ನೀಡಿದೆ. ಆಗಸ್ಟ್ 1ರಿಂದ ಈ ಹೊಸ ದರಗಳು ಜಾರಿಗೆ ಬರಲಿವೆ ಎಂದು ಮೃಗಾಲಯ ಪ್ರಾಧಿಕಾರ ಪ್ರಕಟಿಸಿದೆ.
ವಯಸ್ಕರಿಗೆ ಟಿಕೆಟ್ ದರ ಈಗಿನ ರೂ.100ರಿಂದ ರೂ.120ಕ್ಕೆ ಏರಿಕೆ, ಮಕ್ಕಳಿಗೆ ಟಿಕೆಟ್ ದರ ರೂ.50 ರಿಂದ ರೂ60ಕ್ಕೆ ಏರಿಕೆ,ಹಿರಿಯ ನಾಗರಿಕರಿಗೆ ಟಿಕೆಟ್ ದರ ರೂ.60 ರಿಂದ ರೂ.70ಕ್ಕೆ ಏರಿಕೆಯಾಗಿದೆ.