ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿರುವ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯನ ಸಮಾಧಿ ಸ್ಮಾರಕದ ಮೇಲೆ ಇತ್ತೀಚೆಗೆ ಪ್ರಾಣಿ ವಧೆ ನಡೆದಿದ್ದು ಭಾರೀ ಚರ್ಚೆ ಕಾರಣವಾಗಿತ್ತು.
ಇದೀಗ ಸ್ಮಾರಕ ನಿಗ್ರಾಣಿಗೆ ತಾತ್ಕಾಲಿಕವಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಸರ್ಕಾರಕ್ಕೆ ವರದಿ ನೀಡಿದೆ.
ಸ್ಮಾರಕದ ಮೇಲೆ ಪ್ರಾಣಿ ವಧೆ ಮಾಡಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು. ಈ ಕುರಿತು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಅವರು ಇಲಾಖೆಯ ಬಳಿ ವರದಿ ಕೇಳಿದ್ದರು.
ಈ ಕುರಿತು ಮಾಹಿತಿ ನೀಡಿರುವ ಹಂಪಿಯ ವಿಭಾಗದ ಉಪ ನಿರ್ದೇಶಕ ಆರ್. ಶೇಜೇಶ್ವರ, ಮಾಧ್ಯಮಗಳಲ್ಲಿ ಈ ಕುರಿತು ವರದಿಯಾದ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಸ್ಥಳೀಯ ಜನರಿಗೆ ತಿಳಿವಳಿಕೆ ನೀಡಿ ಮುಂದೆ ಈ ರೀತಿ ಮಾಡದಂತೆ ಸೂಚಿಸಲಾಗಿದೆ. ಹಂಪಿ ಸ್ಮಾರಕಗಳ ಬಳಿ ನೌಕರರನ್ನು ಕಳುಹಿಸಿ ಸ್ವಚ್ಛತೆ ಮಾಡಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.