ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈಪ್ರೊಫೈಲ್ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಕೋಟ್ದ್ವಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಇಂದು (ಮೇ 30) ತನ್ನ ತೀರ್ಪು ಪ್ರಕಟಿಸಿದೆ. 2022 ರಲ್ಲಿ 19 ವರ್ಷದ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಅವರ ಕೊಲೆಗೆ ಸಂಬಂಧಿಸಿದಂತೆ ಉತ್ತರಾಖಂಡದ ರೆಸಾರ್ಟ್ ಮಾಲೀಕ, ಇಬ್ಬರು ಉದ್ಯೋಗಿಗಳು ಜೀವಾವಧಿ ಶಿಕ್ಷೆಗೊಳಗಾಗಿದ್ದಾರೆ.
ಇಂದು ಕೋಟ್ದ್ವಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಈ ಪ್ರಕರಣದ ಮೂವರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದರು. ಇದಲ್ಲದೆ, ಮೃತ ಯುವತಿ ಅಂಕಿತಾ ಭಂಡಾರಿ ಅವರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮೂವರಿಗೆ ನ್ಯಾಯಾಲಯ ಆದೇಶಿಸಿದೆ.
ಅಂಕಿತಾ ಭಂಡಾರಿ ಯಾರು?
ಪೌರಿ ಜಿಲ್ಲೆಯ ನಿವಾಸಿ ಅಂಕಿತಾ ಭಂಡಾರಿ ಹೃಷಿಕೇಶದ ವನಂತರಾ ರೆಸಾರ್ಟ್ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಅವರ ಸಹಚರರಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್ ವಿಐಪಿ ಅತಿಥಿಗೆ ಹೆಚ್ಚುವರಿ ಸೇವೆಗಳನ್ನು ನೀಡುವಂತೆ ಒತ್ತಡ ಹೇರಿದಾಗ ಅದಕ್ಕೆ ವಿರೋಧಿಸಿದ ಅಂಕಿತಾ ಅವರನ್ನು ಬ್ಯಾರೇಜ್ಗೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಅಂಕಿತಾ ಅವರನ್ನು ಪುಲ್ಕಿತ್ ಆರ್ಯ ಮತ್ತು ಅವರ ಸ್ನೇಹಿತರಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್ ಗುಪ್ತಾ ಸೆಪ್ಟೆಂಬರ್ 18, 2022ರಂದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಂಕಿತಾ ಭಂಡಾರಿಯ ಶವವನ್ನು ಸೆಪ್ಟೆಂಬರ್ 24ರಂದು ಋಷಿಕೇಶದ ಚಿಲ್ಲಾ ಕಾಲುವೆಯಿಂದ ಹೊರಗೆ ತೆಗೆಯಲಾಯಿತು. ಅಧಿಕಾರಿಗಳು ಅವರ ಶವವನ್ನು ಪತ್ತೆಹಚ್ಚುವ ಮೊದಲು 6 ದಿನಗಳ ಕಾಲ ಆಕೆ ಕಾಣೆಯಾಗಿದ್ದರು. ಉಪ ಪೊಲೀಸ್ ಮಹಾನಿರ್ದೇಶಕ ಪಿ ರೇಣುಕಾ ದೇವಿ ನೇತೃತ್ವದ ಎಸ್ಐಟಿ ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿತು.