ಹೊಸದಿಗಂತ ವರದಿ, ಅಂಕೋಲಾ
ಪಹಣಿ ಪತ್ರದಲ್ಲಿ ವಾರಸುದಾರರ ಸೇರ್ಪಡೆ ಮತ್ತು ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿದಂತೆ ಅಂಕೋಲಾ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕನಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ಕಲಂ 7ರ ಅಡಿ ಒಂದು ವರ್ಷ ಕಠಿಣ ಕಾರಾಗೃಹವಾಸ ಮತ್ತು 5 ಸಾವಿರ ರೂಪಾಯಿ ದಂಡ ಶಿಕ್ಷೆ ಪ್ರಕಟಿಸಿದ್ದು ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 6 ತಿಂಗಳ ಕಾರಾಗೃಹವಾಸ ವಿಧಿಸಿ ಪ್ರಧಾನ ತೀರ್ಪು ಪ್ರಕಟಿಸಿದೆ.
ಅದೇ ರೀತಿ ಕಲಂ 13(1) ಡಿ ಮತ್ತು 13(2) ಅಡಿಯಲ್ಲಿ 2 ವರ್ಷಗಳ ಕಠಿಣ ಕಾರಾಗೃಹವಾಸ ಮತ್ತು 10 ಸಾವಿರ ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ವರ್ಷದ ಕಾರಾಗೃಹವಾಸ ಶಿಕ್ಷೆಯನ್ನು ವಿಧಿಸಲಾಗಿದೆ.
ಅಂಕೋಲಾ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಶಬ್ಬೀರ ಶೇಖ್ ಎನ್ನುವವರು ತಾಲೂಕಿನ ಬೊಬ್ರವಾಡ ನಿವಾಸಿ ಗಣೇಶ ಸೀತಾರಾಮ ನಾಯ್ಕ ಎನ್ನುವವರ ಜಮೀನಿಗೆ ಸಂಬಂಧಿಸಿದ ಪಹಣಿ ಪತ್ರದ ಕಲಂ 9 ರಲ್ಲಿ ಕರ್ನಾಟಕ ಸರ್ಕಾರದ ಹೆಸರು ಕಡಿಮೆ ಮಾಡಿ ತಮ್ಮ ತಾಯಿ ಶಾರದಾ ಸೀತಾರಾಮ ನಾಯ್ಕ ಎನ್ನುವವರನ್ನು ವಾರಸುದಾರರನ್ನಾಗಿಸಿ ನಮೂನೆ 10 ಹಕ್ಕು ಪತ್ರ ವಿತರಿಸಲು ಹಣಕ್ಕೆ ಬೇಡಿಕೆ ಇಟ್ಟು 1500 ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ನಡೆದ ಲೋಕಾಯುಕ್ತ ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಶಬ್ಬೀರ ಶೇಖ್ ಅವರು ಪಡೆದಿರುವ ಹಣದ ಸಮೇತ ಸಿಕ್ಕಿ ಬಿದ್ದ ಕಾರಣ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿ ವಿಚಾರಣೆ ನಡೆಸಲಾಗಿತ್ತು.
ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ್ ತೀರ್ಪು ನೀಡಿದ್ದಾರೆ. ಲೋಕಾಯುಕ್ತ ಸಂಸ್ಥೆಯ ಪರವಾಗಿ ಸರ್ಕಾರಿ ಅಭಿಯೋಜಕ ಲಕ್ಷ್ಮೀಕಾಂತ್ ಪ್ರಭು ವಾದ ಮಂಡಿಸಿದ್ಧರು ಎಂದು ಲೋಕಾಯುಕ್ತ ಕಾರವಾರದ ವರಿಷ್ಠ ಕುಮಾರಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.