ದಿಗಂತ ವರದಿ ಅಂಕೋಲಾ :
ತಾಲೂಕಿನ ಶಿರೂರ ನಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿ ಸಿಲುಕಿರುವ ಕೇರಳದ ಲಾರಿ ಚಾಲಕ ಅರ್ಜುನ್ ಶೋಧ ಕಾರ್ಯಕ್ಕೆ ಭಾರತೀಯ ಮಿಲಿಟರಿ ಪಡೆ ಆಗಮಿಸಲಿದೆ. ಭಾನುವಾರ ಕಾರ್ಯಾಚರಣೆ ಶುರುವಾಗಲಿದೆ.
ಈ ಬಗ್ಗೆ ಈಗ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದು, ಎಸ್ಪಿ ನಾರಾಯಣ ಸಹ ದೃಢಪಡಿಸಿದ್ದಾರ ಶಿರೂರು ಗುಡ್ಡ ಕುಸಿತದ ಭೀಕರತೆಯ ಬಗ್ಗೆ ತಿಳಿದ,ಮಾನ್ಯ ಪ್ರಧಾನ ಮಂತ್ರಿಗಳ ಕಾರ್ಯಾಲಯವು , ಈ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲು ಮಿಲಿಟರಿ ಪಡೆಯನ್ನು ಕಳುಹಿಸಿದ್ದು ಈ ಪಡೆಯು ಕೆಲವೇ ನಿಮಿಷಗಳಲ್ಲಿ ಶಿರೂರಿಗೆ ತಲುಪಲಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಈತನ ಪತ್ತೆಗೆ ಸಮರ್ಪಕ ಪ್ರಯತ್ನ ಸಾಗುತ್ತಿಲ್ಲ ಎಂದು ಕೇರಳ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಿಗೇ ಈಗ ಕಾರ್ಯಾಚರಣೆಗೆ ಇನ್ನಷ್ಟು ವೇಗ ನೀಡಲಾಗಿದೆ. ಕೇರಳದ ಬೆಂಜ್ ಲಾರಿ ಮತ್ತು ಚಾಲಕ ಅರ್ಜುನ್ ಗುಡ್ಡ ಕುಸಿತದ ದಿನದಿಂದ ಕಣ್ಮರೆಯಾಗಿದ್ದಾರೆ. ಲಾರಿ ಮಾಲಕ ಮತ್ತು ಅರ್ಜುನ್ ಸಹೋದರರ ಪ್ರಕಾರ ದುರ್ಘಟನೆ ನಂತರ ಎರಡು ಬಾರಿ ಅರ್ಜುನ್ ಮೊಬೈಲ್ ಸದ್ದು ಮಾಡಿದೆ. ಹೀಗಾಗಿ ಆತ ಬದುಕಿದ್ದಾನೆ ಎಂಬ ವಿಶ್ವಾಸ ಅವರದ್ದು. ಜೊತೆಗೆ ಇವರೆಲ್ಲ ಕಾರ್ಯಾಚರಣೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು.
ಈಗಾಗಲೇ ರಾಡಾರ್, ಮೆಟಲ್ ಡಿಟೆಕ್ಟರ್ ಬಳಸಿ ಎನ್.ಡಿ.ಆರ್.ಎಫ್, ನೇವಿ ಮತ್ತಿತರ ರಕ್ಷಣಾ ಪಡೆ ಕಾರ್ಯಾಣರಣೆ ನಡೆಸುತ್ತಿದ್ದರೂ ಈಗ ಭಾರತೀಯ ಮಿಲಿಟರಿ ಪಡೆಯನ್ನೂ ಕರೆಸಲಾಗಿದೆ.
ಅಮಿತ್ ಶಾಗೆ ಮಾಹಿತಿ
ಕಾರ್ಯಾಚರಣೆ ಬಗ್ಗೆ ಕೇರಳ ಸರ್ಕಾರದ ಅಸಮಾಧಾನದ ಬೆನ್ನಿಗೇ ಇಡೀ ದುರ್ಘಟನೆ ಬಗ್ಗೆ ಕೇಂದ್ರ ಗೃಹ ಮಂತ್ರಿ ಅಮಿತ ಶಾ ಸಂಪೂರ್ಣ ಮಾಹಿತಿ ಪಡೆದಿರುವುದಾಗಿ ತಿಳಿದು ಬಂದಿದೆ.
ಇಂದು ಸಿಎಂ ಸಿದ್ದರಾಮಯ್ಯ ಸಹ ಸ್ಥಳಕ್ಕೆ ಭೇಟಿ ನೀಡಲಿದ್ದು, ಈ ಭೇಟಿಯತ್ತ ಎಲ್ಲರ ಚಿತ್ತ ನೆಟ್ಟಿದೆ.