ದಿಗಂತ ವರದಿ ಅಂಕೋಲಾ:
ತಾಲೂಕಿನ ಶಿರೂರು ಗುಡ್ಡ ಕುಸಿತದ ದುರ್ಘಟನೆಯಲ್ಲಿ ಕಣ್ಮರೆಯಾಗಿದ್ದ ಉಳುವರೆ ನಿವಾಸಿ ಸಣ್ಣಿ ಗೌಡ ಮೃತ ದೇಹ ಗಂಗಾವಳಿ ಬಳಿ ನದಿ ತೀರದಲ್ಲಿ ಮಂಗಳವಾರ ಮುಂಜಾನೆ ಪತ್ತೆಯಾಗಿದೆ.
ಕಳೆದ ಮಂಗಳವಾರ ಜುಲೈ 16 ರಂದು ಶಿರೂರು ಬಳಿ ಗುಡ್ಡ ಕುಸಿದು ಗಂಗಾವಳಿ ನದಿಯಲ್ಲಿ ಗುಡ್ಡದ ಕಲ್ಲು ಮಣ್ಣುಗಳು ತುಂಬಿ ಹೊಳೆಯಾಚೆ ಬದಿಯ ಉಳುವರೆ ಗ್ರಾಮಕ್ಕೆ ಭಾರೀ ಪ್ರಮಾಣದಲ್ಲಿ ನದಿಯ ನೀರು ಅಪ್ಪಳಿಸಿದ ಪರಿಣಾಮ ಸಣ್ಣಿ ಗೌಡ ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ಕಳೆದ ಒಂದು ವಾರದಿಂದ ಸಣ್ಣಿ ಗೌಡ ಸೇರಿದಂತೆ ದುರ್ಘಟನೆಯಲ್ಲಿ ಕಣ್ಮರೆಯಾಗಿದ್ದವರ ಶೋಧ ಕಾರ್ಯ ನಡೆಸಲಾಗುತಿತ್ತು. ಇದೀಗ ಒಂದು ವಾರದ ನಂತರ ಸಣ್ಣಿ ಗೌಡ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದುವರೆಗೆ ಒಟ್ಟು 8 ಜನರ ಮೃತ ದೇಹಗಳು ಪತ್ತೆಯಾದಂತಾಗಿದೆ.
ಮಂಗಳವಾರ ಸೇನಾಪಡೆಯ 30 ಕ್ಕೂ ಹೆಚ್ಜು ಯೋಧರು, ಮೆಟಲ್ ಡಿಕ್ಟೇರರ್ ಮೂಲಕ ನದಿಯ ಮಧ್ಯಭಾಗದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, NDRF ಮತ್ತು SDRF ಸಿಬ್ಬಂದಿ ಕೂಡಾ ಅವರಿಗೆ ಸಾಥ್ ನೀಡಿದ್ದಾರೆ. ನದಿ ಭಾಗದಲ್ಲಿನ ಮಣ್ಣು ತೆರವು ಕಾರ್ಯಾಚರಣೆ ಕೂಡಾ ನಡೆಯುತ್ತಿದೆ.