Friday, December 12, 2025

ಮತ್ತೆ ಅಮರಣಾಂತ ಉಪವಾಸ ನಡೆಸುವುದಾಗಿ ಅಣ್ಣಾ ಹಜಾರೆ ಘೋಷಣೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:


ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಲೋಕಾಯುಕ್ತ ಕಾನೂನು ಜಾರಿಗೆ ಒತ್ತಾಯಿಸಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಮರಣಾಂತ ಉಪವಾಸ ನಡೆಸುವುದಾಗಿ ಘೋಷಿಸಿದ್ದಾರೆ.

ರಾಲೇಗನ್ ಸಿದ್ಧಿಯಲ್ಲಿ ಜನವರಿ 30ರಿಂದ ತಾವು ಅನಿರ್ದಿಷ್ಟವಧಿಯ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ತಿಳಿಸಿದ್ದಾರೆ.

ಇದು ತಮ್ಮ ಅಂತಿಮ ಹೋರಾಟ ಎಂದಿರುವ ಅವರು, ಸಾರ್ವಜನಿಕ ಕಲ್ಯಾಣಕ್ಕೆ ಈ ಕಾನೂನು ಅಗತ್ಯವಿದೆ. ಆದರೆ ಇದನ್ನು ಜಾರಿಗೆ ತರುವಲ್ಲಿ ಮಹಾರಾಷ್ಟ್ರ ಸರ್ಕಾರ ಅನೇಕ ವರ್ಷಗಳಿಂದ ನಿರ್ಲಕ್ಷ ಮಾಡುತ್ತಿದೆ ಎಂದು ಹೇಳಿದರು.

2011ರಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆ ನಡೆಸಿ ದೇಶದ ಗಮನ ಸೆಳೆದಿದ್ದ ಅಣ್ಣಾ ಹಜಾರೆ ಮಹಾರಾಷ್ಟ್ರದಲ್ಲಿ ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ 2022ರಲ್ಲಿ ರಾಲೇಗನ್ ಸಿದ್ಧಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆಗ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ಕೃಷಿ ಸಚಿವರು ಅವರ ಮನವೊಲಿಸಿ ಉಪವಾಸ ಸತ್ಯಾಗ್ರಹ ಮರಳಿ ಪಡೆಯುವಂತೆ ಮಾಡಿದ್ದರು.

ಆ ಬಳಿಕ ಲೋಕಾಯುಕ್ತ ಕಾನೂನು ಜಾರಿಗೆ ಒಂದು ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಲೋಕಾಯುಕ್ತ ಕಾಯ್ದೆಯ ಕರಡನ್ನು ಸಿದ್ಧಪಡಿಸಿತ್ತು. ಇದನ್ನು ಮಹಾರಾಷ್ಟ್ರ ವಿಧಾನಸಭೆಯ ಎರಡೂ ಸದನಗಳಲ್ಲಿ ಮಂಡಿಸಲಾಗಿದ್ದು, ಇದನ್ನು ಅಂಗೀಕರಿಸಿ ಅಂತಿಮ ಒಪ್ಪಿಗೆಗಾಗಿ ರಾಷ್ಟ್ರಪತಿಗೆ ಕಳುಹಿಸಿಕೊಡಲಾಗಿದೆ. ಆದರೆ ಆ ಬಳಿಕ ಏನಾಗಿದೆ ಎನ್ನುವ ಕುರಿತು ಮಾಹಿತಿ ಇಲ್ಲ. ಕಾಯ್ದೆಯೂ ಜಾರಿಗೆ ಬಂದಿಲ್ಲ. ಹೀಗಾಗಿ ಅಣ್ಣಾ ಹಜಾರೆ ಅವರು ಮತ್ತೆ ಪ್ರತಿಭಟನೆಗೆ ಕುಳಿತುಕೊಳ್ಳುವುದಾಗಿ ಹೇಳಿದ್ದಾರೆ.

ಪ್ರತಿಭಟನೆಯ ಕುರಿತು ಘೋಷಣೆ ಮಾಡುವುದಕ್ಕೂ ಮೊದಲು ಕಾಯ್ದೆಯ ಕುರಿತು ಪ್ರಶ್ನಿಸಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಏಳು ಪತ್ರಗಳನ್ನು ಬರೆದಿದ್ದೇನೆ. ಆದರೆ ಅವರಿಂದ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ಹಜಾರೆ ಬೇಸರ ವ್ಯಕ್ತಪಡಿಸಿದ್ದಾರೆ.

ಅಣ್ಣಾ ಹಜಾರೆ ಅವರು ಜನವರಿ 30ರಂದು ಉಪವಾಸಕ್ಕೆ ಕುಳಿತುಕೊಳ್ಳುವುದಾಗಿ ಘೋಷಿಸಿದ್ದು, ಈ ದಿನ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಾಗಿದೆ. ತಮ್ಮ ಸಂಪೂರ್ಣ ಜೀವನವೇ ದೇಶದ ಕಲ್ಯಾಣಕ್ಕಾಗಿ ಮೀಸಲಾಗಿದೆ ಎಂದಿರುವ ಅವರು ನನ್ನ ದೇಹದಲ್ಲಿ ಜೀವ ಇರುವವರೆಗೂ ಸಮಾಜಕ್ಕಾಗಿ ದುಡಿಯುತ್ತೇನೆ. ಕಾನೂನು ಜಾರಿಯಾಗುವವರೆಗೂ ಹೋರಾಡುತ್ತೇನೆ ಇಲ್ಲವಾದರೆ ನಾನು ಅಲ್ಲಿಯೇ ಸಾಯುತ್ತೇನೆ ಎಂದು ಅವರು ಹೇಳಿದರು.

error: Content is protected !!