ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಾನ ಸಭಾ ಚುನಾವಣಾ ಕಣ ರಂಗೇರಿದ್ದು,ಇಲ್ಲಿನ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ. ಕೃಷ್ಣಪ್ಪರನ್ನು ಆಯ್ಕೆ ಮಾಡಲಾಗಿದ್ದು, ಇದೀಗ ಸುಳ್ಯದ ಅನೇಕ ಕಾಂಗ್ರೆಸಿಗರನ್ನು ಕೆರಳಿಸಿದೆ.
ಮಡಿಕೇರಿಯ ಹೆಚ್.ಎಂ. ನಂದಕುಮಾರ್ ಅವರಿಗೆ ಟಿಕೆಟ್ ನೀಡದೇ ಇರುವುದನ್ನು ಖಂಡಿಸಿ ಅಸಮಾಧಾನಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ನಂದಕುಮಾರ್ ಅವರ ಅಭಿಮಾನಿ ಬಳಗದ ಹೆಸರಿನಲ್ಲಿ ಸಭೆ ಸೇರಿ ಕಾಂಗ್ರೇಸ್ ಹೈಕಮಾಂಡಿನ ನಿರ್ಣಯವನ್ನು ಖಂಡಿಸಿದ್ದಾರೆ.
ಸುಮಾರು 250 ಕ್ಕಿಂತಲೂ ಹೆಚ್ಚು ಕಾಂಗ್ರೆಸ್ ಮುಂಚೂಣಿ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎನ್ನುವ ಉದ್ದೇಶದಿಂದ ಜನರೊಂದಿಗೆ ಬೆರೆಯುವ, ಕ್ಷೇತ್ರದಲ್ಲಿ ಅಪಾರ ಜನ ಬೆಂಬಲ ಹೊಂದಿರುವ ನಂದಕುಮಾರ್ ಅವರಿಗೆ ಟಿಕೆಟ್ ನೀಡಬೇಕೆನ್ನುವುದು ನಮ್ಮ ಬಯಕೆಯಾಗಿತ್ತು. ಆದರೆ ನಮ್ಮ ಆಶಯವನ್ನು ಪರಿಗಣಿಸದೇ ಹೈಕಮಾಂಡ್ ತಪ್ಪು ನಿರ್ಧಾರ ಮಾಡಿದೆ ಎಂದು ಕಾರ್ಯಕರ್ತರು ಸಭೆಯಲ್ಲಿ ಆಕ್ರೋಶ
ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದಹೆಚ್.ಎಂ ನಂದಕುಮಾರ್ ಸುಳ್ಯ ಕ್ಷೇತ್ರದಲ್ಲಿ ನಿರಂತರವಾಗಿ ಓಡಾಡಿಕೊಂಡು ಕಾರ್ಯಕರ್ತರೊಂದಿಗೆ ಬೆರೆಯುತ್ತಾ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಹಲವು ಕಡೆ ಆಹಾರ ಕಿಟ್‌ಗಳನ್ನು ವಿತರಿಸಿದ್ದಾರೆ. ನಂದಕುಮಾರ್ ಅವರಿಗೆ ಟಿಕೆಟ್ ಸಿಕ್ಕಿದರೆ ಸುಳ್ಯದಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸುವ ಅವಕಾಶ ಇತ್ತು. ಆದರೆ ಈಗ ಇನ್ನೊಬ್ಬರಿಗೆ ಟಿಕೆಟ್ ನೀಡಿ ಹೈಕಮಾಂಡ್ ನಮ್ಮನ್ನು ನಿರಾಶೆಗೊಳಿಸಿದೆ ಎಂದು ಸಭೆಯಲ್ಲಿದ್ದ ಅಸಮಾಧಾನಿತರು ಹೇಳಿಕೊಂಡಿದ್ದಾರೆ.