ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ನಿವೃತ್ತಿ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಸಂಸ್ಥೆಗೆ ಭಾರತದ ಮೊದಲ ಮಹಿಳಾ ರಾಯಭಾರಿ (ಭಾರತದಿಂದ UN ಗೆ ಖಾಯಂ ಪ್ರತಿನಿಧಿ) ಆಗಿದ್ದ ರುಚಿರಾ ಕಾಂಬೋಜ್ ಸ್ವಯಂ ನಿವೃತ್ತಿ ಘೋಷಣೆ ಮಾಡಿಕೊಂಡಿದ್ದಾರೆ.

ತಾವು ನಿವೃತ್ತಿ ಪಡೆಯುತ್ತಿರೋದನ್ನು ಶನಿವಾರ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿರುವ ರುಚಿರಾ ಕಾಂಬೋಜ್, ಇಂತಹ ಅದ್ಭುತ ಅವಕಾಶ ನೀಡಿದ್ದಕ್ಕೆ ಭಾರತಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ರುಚಿರಾ ಕಾಂಬೋಜ್, ಜಾಗತಿಕ ಸಂಸ್ಥೆಗೆ ಭಾರತದ ಪ್ರತಿಷ್ಠಿತ ರಾಯಭಾರಿ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳಾ ಅಧಿಕಾರಿಯಾಗಿದ್ದರು.

1987ರಲ್ಲಿ ರುಚಿರಾ ಕಾಂಬೋಜ್ ಭಾರತೀಯ ವಿದೇಶಾಂಗ ಸೇವೆಗೆ ಸೇರ್ಪಡೆಯಾಗಿದ್ದರು. ಸುದೀರ್ಘ 35 ವರ್ಷ ಸೇವೆ ಸಲ್ಲಿಸಿದ ಬಳಿಕ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ರುಚಿರಾ ಕಾಂಬೋಜ್ ಹಿಂದಿ, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳ ಮೇಲೆ ಪ್ರಬಲ ಹಿಡಿತವನ್ನು ಹೊಂದಿದ್ದಾರೆ. ರುಚಿರಾ ಕಾಂಬೋಜ್ ಔಪಚಾರಿಕವಾಗಿ ಆಗಸ್ಟ್ 2, 2022 ರಂದು ನ್ಯೂಯಾರ್ಕ್‌ಗೆ ಭಾರತದ ಖಾಯಂ ರಾಯಭಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

1989 ರಿಂದ 1991 ರವರೆಗೆ ಪ್ಯಾರಿಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಮೂರನೇ ಕಾರ್ಯದರ್ಶಿಯಾಗಿ ರಾಜತಾಂತ್ರಿಕ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.

ಯಾರು ಈ ರುಚಿರಾ ಕಾಂಬೋಜ್?
3 ಮೇ 1964 ರಂದು ಜನಿಸಿದ ರುಚಿರಾ ಕಾಂಬೋಜ್ ತಂದೆ ಭಾರತೀತಯ ಸೇನೆಯಲ್ಲಿ ಅಧಿಕಾರಿಯಾಗಿದ್ದು, ತಾಯಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ. ರುಚಿರಾ ತಾಯಿ ಉತ್ತಮ ಬರಹಗರ್ತಿಯೂ ಆಗಿದ್ದರು. ದೆಹಲಿ, ವಡೋದರಾ ಮತ್ತು ಜಮ್ಮುವಿನಲ್ಲಿ ರುಚಿರಾ ಶಿಕ್ಷಣ ಪಡೆದುಕೊಂಡಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣ ಹಾಗೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಪದವಿ ಪಡೆದುಕೊಂಡಿದ್ದಾರೆ. ರುಚಿರಾ ಪತಿ ದಿವಾಕರ್ ಕಾಂಬೋಜ್ ಉದ್ಯಮಿಯಾಗಿದ್ದು, ದಂಪತಿಗೆ ಸಾರಾ ಹೆಸರಿನ ಓರ್ವ ಮಗಳಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಪುತ್ರಿ ಸಾರಾ ಫೋಟೋಗಳನ್ನು ರುಚಿರಾ ಕಾಂಬೋಜ್ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

1987ರ ಬ್ಯಾಚ್‌ನ ಅಧಿಕಾರಿ
ರುಚಿರಾ ಕಾಂಬೋಜ್ 1987ರ ಬ್ಯಾಚ್‌ ಅಧಿಕಾರಿ. 1989-91ರಲ್ಲಿ ಫ್ರಾನ್ಸ್‌ ಭಾರತೀಯ ರಾಯಭಾರ ಕಚೇರಿಯಲ್ಲಿ ಮೂರನೇ ಕಾರ್ಯದರ್ಶಿ ತಮ್ಮ ರಾಜತಾಂತ್ರಿಕ ಸೇವೆಯನ್ನು ಆರಂಭಿಸಿದ್ದರು.ಯುರೋಪ್, ಮಾರಿಷಸ್, ಪೋರ್ಟ್ ಲೂಯಿಸ್‌ನಲ್ಲಿಯೂ ಕಾರ್ಯದರ್ಶಿಯಾಗಿ ರುಚಿರಾ ಕಾಂಬೋಜ್ ಸೇವೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಒಳ್ಳೆಯ ಮಾಹಿತಿ, ಬರವಣಿಗೆ ಚನ್ನಾಗಿದೆ,ಧನ್ಯವಾದಗಳು.ದೇಶದ ಇಂಥ ಸುದ್ದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡಬೇಕು ,ಅದರಿಂದ ಬೇರೆಯವರಿಗೂ ಸ್ಪೂರ್ತಿ ದೊರೆಯುವುದು

LEAVE A REPLY

Please enter your comment!
Please enter your name here

error: Content is protected !!