ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ಕೊಡಗಿನ ಅಬ್ದುಲ್ ರೆಹಮಾನ್ ಬಂಧನ

ಹೊಸದಿಗಂತ ವರದಿ ಮಡಿಕೇರಿ:

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಕೊಡಗಿನ‌ ಅಬ್ದುಲ್ ರೆಹಮಾನ್’ನನ್ನು ರಾಷ್ಡ್ರೀಯ ತನಿಖಾ ಸಂಸ್ಥೆ (ಎನ್ ಐಎ) ಅಧಿಕಾರಿಗಳು ಕೇರಳದಲ್ಲಿ ಬಂಧಿಸಿದ್ದಾರೆ.

ಕೊಡಗಿನ ಸೋಮವಾರಪೇಟೆ ಸಮೀಪದ ಕಲ್ಕಂದೂರು ನಿವಾಸಿಯಾಗಿದ್ದ ಅಬ್ದುಲ್ ರೆಹಮಾನ್ ಬಂಧನಕ್ಕೊಳಗಾದವನಾಗಿದ್ದಾನೆ. ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಿಗೆ ಕೊಡಗಿನಲ್ಲಿ ಆಶ್ರಯ ನೀಡಿದ ಆರೋಪವನ್ನು ಅಬ್ದುಲ್ ರೆಹಮಾನ್ ಎದುರಿಸುತ್ತಿದ್ದ.
ಪ್ರಕರಣದಲ್ಲಿ ತನ್ನ ಕೈವಾಡವಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆಯುತ್ತಿದ್ದಂತೆ ಆತ ಕತಾರ್’ಗೆ ತೆರಳಿ ದೋಹಾದಲ್ಲಿ ತಲೆಮರೆಸಿಕೊಂಡಿದ್ದನೆನ್ನಲಾಗಿದೆ.

ಶುಕ್ರವಾರ ಆತ ವಿದೇಶದಿಂದ ಆಗಮಿಸುತ್ತಿರುವ ಮಾಹಿತಿ ಪಡೆದ ಎನ್ಐಎ ಅಧಿಕಾರಿಗಳು ಆತನನ್ನು ಕೇರಳದ ಕಣ್ಣೂರು ಅಂತರರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ ಅಲ್ಲಿಂದ ಆತನನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಕರದೊಯ್ದಿದ್ದಾರೆ.

ಯುವ ಮೋರ್ಚಾದ ಪ್ರವೀಣ್ ನೆಟ್ಟಾರು ಅವರನ್ನು ಪಿಎಫ್‌ಐ ಸದಸ್ಯರು 2022ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹತ್ಯೆಗೈದಿದ್ದರು. ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಗಳು ಮತ್ತು ಇತರರು ತಲೆಮರೆಸಿಕೊಳ್ಳಲು ಅಬ್ದುಲ್ ರೆಹಮಾನ್ ಪಿಎಫ್ಐ ನಾಯಕರ ನಿರ್ದೇಶನದ ಮೇರೆಗೆ ಸ್ವಯಂಪ್ರೇರಣೆಯಿಂದ ಆಶ್ರಯ ನೀಡಿದ್ದಾಗಿ ತನಿಖೆಗಳು ಬಹಿರಂಗಪಡಿಸಿದ್ದವು.

ಪ್ರಕರಣದ ಆರೋಪಿಗಳ ಬಂಧನವಾಗುತ್ತಿದ್ದಂತೆ ಅಬ್ದುಲ್ ರೆಹಮಾನ್ ಕತಾರ್’ಗೆ ಪಲಾಯನ ಮಾಡಿದ್ದ ಆತನ ಪತ್ತೆಗೆ 4 ಲಕ್ಷ ರೂ.ಗಳ ಬಹುಮಾನವನ್ನೂ ಘೋಷಿಸಲಾಗಿತ್ತು. ಜನರಲ್ಲಿ ಭಯವನ್ನುಂಟು ಮಾಡುವ ಮತ್ತು ಸಮಾಜದಲ್ಲಿ ಕೋಮು ದ್ವೇಷ ಮತ್ತು ಅಶಾಂತಿಯನ್ನು ಮೂಡಿಸುವ ದೊಡ್ಡ ಪಿತೂರಿಯ ಭಾಗವಾಗಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿದೆ ಎಂದು ಅಬ್ದುಲ್ ರೆಹಮಾನ್ ಬಂಧನದ ಬಳಿಕ ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!