ಹೊಸ ದಿಗಂತ ಡಿಜಿಟಲ್ ಡೆಸ್ಕ್:
RCB ತಂಡದ ಬೌಲರ್ ಯಶ್ ದಯಾಳ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಬೆನ್ನಲ್ಲೇ ದೂರು ದಾಖಲಿಸಿದ್ದ ಗಾಜಿಯಾಬಾದ್ ಮಹಿಳೆಯಿಂದ ಹೊಸ ಆರೋಪ ಕೇಳಿಬಂದಿದೆ.
ನಾನು ಯಶ್ ದಯಾಳ್ ಅವರ ಮನೆಯಲ್ಲಿ 15 ದಿನಗಳ ಕಾಲ ತಂಗಿದ್ದೆ. ಯಶ್ ನನ್ನನ್ನ ಊಟಿ ಪ್ರವಾಸಕ್ಕೂ ಕರೆದುಕೊಂಡು ಬಂದಿದ್ದರು. ಹಲವು ಬಾರಿ ಅವರ ಮನೆಗೆ ಹೋಗಿದ್ದೆ, ಕುಟುಂಬದೊಂದಿಗೆ ಸಮಯ ಕಳೆದಿದ್ದೆ. ಕಳೆದ 5 ವರ್ಷಗಳಿಂದ ದಯಾಳ್ ಜೊತೆ ಸಂಬಂಧ ಹೊಂದಿದ್ದು, ದಯಾಳ್ ಮದುವೆಯಾಗುವುದಾಗಿ ನಂಬಿಸಿದ್ದರು. ನನ್ನನ್ನು ನಿಮ್ಮ ಭಾವಿ ಸೊಸೆ ಎಂದು ಅವರ ಕುಟುಂಬಕ್ಕೆ ಪರಿಚಯಿಸಿದ್ದರು. ಇದರಿಂದ ಮದುವೆಯಾಗುತ್ತಾರೆ ಅನ್ನೋ ಭರವಸೆ ಇತ್ತು. ಆದರೆ ನನಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ ದಯಾಳ್ ನನ್ನನ್ನೂ ಹೊರತುಪಡಿಸಿ ನಾಲ್ಕುವರೆ ವರ್ಷದಲ್ಲಿ ಹಲವು ಮಹಿಳೆಯರೊಟ್ಟಿಗೆ ಸಂಪರ್ಕ ಹೊಂದಿದ್ದ. ಅದಕ್ಕೆ ಸಾಕ್ಷಿಗಳೂ ಇವೆ. ಕನಿಷ್ಠ ಮೂವರೊಟ್ಟಿಗೆ ಅಫೇರ್ ಇಟ್ಟುಕೊಂಡಿದ್ದಾರೆ. ಇದೆಲ್ಲವೂ ಮೊದಲೇ ತಿಳಿದಿದ್ದರೆ ಹಿಂದೆ ಸರಿಯಬಹುದಿತ್ತು. ಆದ್ರೆ ಇದ್ಯಾವುದೂ ನನಗೆ ಗೊತ್ತಿರಲಿಲ್ಲ. ಅವನೂ ಸಹ ನನ್ನ ಬಳಿ ಇದೆಲ್ಲವನ್ನೂ ಮುಚ್ಚಿಟ್ಟಿದ್ದ. ಆ ದೇವರೇ ಎಲ್ಲ ನೋಡಿಕೊಳ್ಳಲಿ ಅಂತ ನಾನು ಸುಮ್ಮನಿದ್ದೆ. ಆದ್ರೆ ನನ್ನನ್ನ ಬಳಸಿಕೊಂಡು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ವಂಚಿಸಿದ್ದಾರೆ ಎಂದು ಆಕೆ ದೂರಿದ್ದಾರೆ.
ಯಶ್ ದಯಾಳ್ ಈ ಪ್ರಕರಣವನ್ನ ಮುಚ್ಚಿಹಾಕಲು ಹಣ ಬಲ ಹಾಗೂ ತಮ್ಮ ಪ್ರಭಾವವನ್ನ ಬಳಸಿದ್ದಾರೆ. ಆದ್ರೆ ನನಗೆ ಕಾನೂನಿನ ಮೇಲೆ ಸಂಪೂರ್ಣ ನಂಬಿಕೆಯಿದೆ. ಹಲವು ಮಹಿಳೆಯರಿಗೆ ವಂಚನೆ ಮಾಡಿರೋದಕ್ಕೆ ಸಾಕ್ಷಿಗಳನ್ನು ಒದಗಿಸಿದ್ದೇನೆ. ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈಗಾಗಲೇ ಯಶ್ ದಯಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ನ್ಯಾಯಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಪೊಲೀಸರಿಗೂ ಮನವಿ ಕೂಡ ಮಾಡಿದ್ದಾರೆ.
ಸದ್ಯ ಮುಖ್ಯಮಂತ್ರಿ ಕಚೇರಿಯಿಂದಲೇ ತನಿಖೆಗೆ ಆದೇಶಿಸಲಾಗಿದ್ದು, ಈ ಸಂಬಂಧ ವರದಿ ನೀಡಲು ಗಾಜಿಯಾಬಾದ್ ಪೊಲೀಸರಿಗೆ ಸೂಚಿಸಲಾಗಿದೆ. ತನಿಖೆಯ ವರದಿ ಸಲ್ಲಿಸಲು ಜುಲೈ 21ರ ತನಕ ಗಡುವು ನೀಡಲಾಗಿದೆ. ಈ ಸಂಬಂಧ ತನಿಖೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಬೆನ್ನಲ್ಲೇ ಯಶ್ ದಯಾಳ್ ಅರೆಸ್ಟ್ ಆಗ್ತಾರಾ ಎಂಬ ಕುತೂಹಲ ಫ್ಯಾನ್ಸ್ಗೆ ಕಾಡ್ತಿದೆ.