ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆಯುತ್ತಿರುವ ಉತ್ಖನನವು ಭೂಗರ್ಭದಲ್ಲಿ ‘ಯಾತ್ರಾರ್ಥಿಗಳ ತೀರ್ಥಗಂಗೆ’ ಎಂದೇ ಕರೆಯಲ್ಪಡುವ ಮುಚ್ಚಲ್ಪಟ್ಟಿದ್ದ ಮತ್ತೊಂದು ಬಾವಿ ಸೋಮವಾರ ಪತ್ತೆಯಾಗಿದೆ.
ಇಲ್ಲಿನ ಶಹಜಾದಿ ಸರೈ ಪ್ರದೇಶದಲ್ಲಿ ಪುರಾತತ್ವ ಇಲಾಖೆ ನಡೆಸುತ್ತಿರುವ ಉತ್ಖನನದಲ್ಲಿ ದೀರ್ಘಕಾಲದಿಂದ ಮುಚ್ಚಿರುವ ಪುರಾತನವಾದ ಶುದ್ಧ ನೀರಿನ ಬಾವಿ ಸಿಕ್ಕಿದೆ. ಇದರ ಪುನರುಜ್ಜೀವನ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ಮೆಟ್ಟಿಲು ಬಾವಿ ಪತ್ತೆಯಾಗಿತ್ತು. ಇದಕ್ಕೆ ಸಮಾನಾಂತರವಾಗಿ ಕ್ಷೇಮನಾಥ ತೀರ್ಥ ಪ್ರದೇಶದಲ್ಲಿ ಮತ್ತೊಂದು ಬಾವಿ ಇರುವ ಬಗ್ಗೆ ಮಾಹಿತಿ ಬಂದಿತ್ತು. ಇಂದು ಗಂಗಾಮೂಲವು ಕಂಡುಬಂದಿದೆ ಎಂದು ಸಂಭಾಲ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವಂದನಾ ಮಿಶ್ರಾ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಕ್ಷೇಮನಾಥ ತೀರ್ಥರ ಪ್ರಧಾನ ಅರ್ಚಕ ಮಹಂತ್ ಬಾಲಯೋಗಿ ದೀನನಾಥ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹೂತು ಹೋಗಿದ್ದ ಪುರಾತನ ಬಾವಿಯನ್ನು ಮತ್ತೆ ತೆರೆಯಲಾಗಿದೆ. ಎಂಟು ಅಡಿ ಆಳದಲ್ಲಿ ನೀರು ಕಾಣಿಸಿಕೊಂಡಿದೆ. ಪ್ರಾಚೀನ ಬಾವಿಯಲ್ಲಿ ಶುದ್ಧ ನೀರು ಇರುವುದು ಅಚ್ಚರಿ ಮತ್ತು ದೈವಾಂಶವೇ ಆಗಿದೆ ಎಂದು ಹೇಳಿದ್ದಾರೆ.
ಸೀತಾಪುರ ಜಿಲ್ಲೆಯಲ್ಲಿರುವ ನೀಮಾಸರ ತೀರ್ಥ ಎಂದೂ ಕರೆಯಲ್ಪಡುವ ಕ್ಷೇಮನಾಥ ತೀರ್ಥವು ದೇಶದ 68 ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಈ ಸ್ಥಳವು ಬಾಬಾ ಕ್ಷೇಮ ನಾಥ್ ಜೀ ಅವರ ಸಮಾಧಿಯ ನೆಲೆಯಾಗಿದೆ. ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಇಷ್ಟಾರ್ಥಗಳನ್ನು ಈಡೇರಿಸುವ ಸುಕ್ಷೇತ್ರ ಎಂಬ ನಂಬಿಕೆಯಿದೆ ಎಂದು ಅವರು ತಿಳಿಸಿದ್ದಾರೆ.
ಪತ್ತೆಯಾದ ಪುರಾತನ ಬಾವಿಯು ಐತಿಹ್ಯ ಹೊಂದಿದೆ. ಇದು ಇಲ್ಲಿಗೆ ಭೇಟಿ ನೀಡುವ ಯಾತ್ರಾರ್ಥಿಗಳ ದಾಹ ತೀರಿಸುವ ತೀರ್ಥಗಂಗೆಯಾಗಿತ್ತು. ಇದೇ ನೀರನ್ನು ಇಲ್ಲಿನ ಜನರು ಬಳಸುತ್ತಿದ್ದರು. ಅದರ ಆಳದಿಂದಾಗಿಯೇ ಅದು ಇನ್ನೂ ಶುದ್ಧ ನೀರನ್ನು ಹೊಂದಿದೆ. 46 ವರ್ಷಗಳಿಂದ ಭೂಗತವಾಗಿದ್ದ ಬಾವಿಯು ಮತ್ತೆ ತೆರೆದಿದ್ದು, ಇಲ್ಲಿನ ಜನರನ್ನು ಅಚ್ಚರಿಗೀಡು ಮಾಡಿದೆ.